ತಕ್ಷಣವೇ ಬಸ್ ನಿಲ್ದಾಣ ಲೋಕಾರ್ಪಣೆಗೆ ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ

| Published : Jan 03 2025, 12:30 AM IST

ತಕ್ಷಣವೇ ಬಸ್ ನಿಲ್ದಾಣ ಲೋಕಾರ್ಪಣೆಗೆ ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕಿಹೆಬ್ಬಾಳು ಹೋಬಳಿಯ ಕೇಂದ್ರ ಸ್ಥಾನವಾಗಿದ್ದು, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಎನ್.ಮೂರ್ತಿರಾವ್, ಹಾಸ್ಯ ಸಾಹಿತಿ ಅ.ರಾ.ಮಿತ್ರ. ಅ.ನ.ಸು, ಆಕಾಶವಾಣಿ ಈರಣ್ಣ ಎಂಬ ಖ್ಯಾತಿಯ ಎ.ಎಸ್.ಮೂರ್ತಿ ಅವರ ಹುಟ್ಟೂರು. ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಸಾವಿರಾರು ಜನರು ಬಂದು ಕೆ.ಆರ್.ಪೇಟೆ, ಕೆ.ಆರ್.ನಗರ ಮುಂತಾದ ಪಟ್ಟಣಕ್ಕೆ ಹೋಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾರಿಗೆ ಸಂಸ್ಥೆ ನಿರ್ಮಿಸಿರುವ ಬಸ್ ನಿಲ್ದಾಣವನ್ನು ತಕ್ಷಣವೇ ಲೋಕಾರ್ಪಣೆ ಮಾಡಿ ಪ್ರಯಾಣಿಕರ ಅನುಕೂಲಕ್ಕೆ ಬಳಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪಾಳು ಬಿದ್ದಿರುವ ನೂತನ ಬಸ್ ನಿಲ್ದಾಣದ ಆವರಣದಲ್ಲಿ ಸೇರಿದ ವಿದ್ಯಾರ್ಥಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಧಿಕ್ಕಾರ ಕೂಗಿ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸುವಂತೆ ಒತ್ತಾಯಿಸಿದರು.

ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ದೊರಕಿಲ್ಲ. ನೂತನ ಬಸ್ ನಿಲ್ದಾಣದ ಆವರಣದಲ್ಲಿ ಗಿಡ ಗೆಂಟೆಗಳು ಬೆಳೆದು ಪುಂಡರ ಅನೈತಿಕ ಚಟುವಟಿಕೆಗಳ ಸ್ಥಳವಾಗಿ ಪರಿವರ್ತನೆಗೊಂಡಿದೆ ಎಂದು ದೂರಿದರು.

ಅಕ್ಕಿಹೆಬ್ಬಾಳು ಹೋಬಳಿಯ ಕೇಂದ್ರ ಸ್ಥಾನವಾಗಿದ್ದು, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಎನ್.ಮೂರ್ತಿರಾವ್, ಹಾಸ್ಯ ಸಾಹಿತಿ ಅ.ರಾ.ಮಿತ್ರ. ಅ.ನ.ಸು, ಆಕಾಶವಾಣಿ ಈರಣ್ಣ ಎಂಬ ಖ್ಯಾತಿಯ ಎ.ಎಸ್.ಮೂರ್ತಿ ಅವರ ಹುಟ್ಟೂರು. ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಸಾವಿರಾರು ಜನರು ಬಂದು ಕೆ.ಆರ್.ಪೇಟೆ, ಕೆ.ಆರ್.ನಗರ ಮುಂತಾದ ಪಟ್ಟಣಕ್ಕೆ ಹೋಗಬೇಕಾಗಿದೆ ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರ ಗ್ರಾಮಸ್ಥರ ಬಹು ದಶಕಗಳಿಂದ ಕನಸಾಗಿದ್ದ ಸುಸರ್ಜಿತ ಬಸ್ ನಿಲ್ದಾಣವನ್ನು ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ ಒಂದು ವರ್ಷ ಕಳೆದರೂ ಕೂಡ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಲ್ಲ ಎಂದು ದೂರಿದರು.

ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಜಲಸೂರು-ಬೆಂಗಳೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಬಿಸಿಲು, ಮಳೆ, ಗಾಳಿ ನಡುವೆ ಬಸ್ ಹತ್ತಲು ಕಾದು ನಿಲ್ಲಬೇಕಾಗಿದೆ. ಈಗಾಗಲೇ ಪತ್ರಿಕೆಗಳಲ್ಲಿ ಪಾಳು ಬಿದ್ದಿರುವ ಬಸ್ ನಿಲ್ದಾಣದ ಬಗ್ಗೆ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ನಿಲ್ದಾಣವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸದ್ಬಳಕೆಗೆ ಶೀಘ್ರವೇ ಉದ್ಘಾಟಿಸಬೇಕು ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಒತ್ತಾಯಿಸಿದರು.

ಈ ವೇಳೆ ಗ್ರಾಮದ ಎ.ಸಿ ಮಂಜೇಗೌಡ, ಮಾದೇಗೌಡ, ಮಂಜುನಾಥ ಗ್ರಾಮಸ್ಥರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.