ಪ್ರವಾಸಿಗರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

| Published : Apr 24 2025, 11:46 PM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.

ಹೊಸಪೇಟೆ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿ ಖಂಡಿಸಿ ನಗರದ ಡಾ.ಪುನೀತ್ ರಾಜಕುಮಾರ ವೃತ್ತದಲ್ಲಿ ಗುರುವಾರ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಯ್ಯಳ್ಳಿ ತಿಮ್ಮಪ್ಪ ಮಾತನಾಡಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವುದು ಖಂಡನೀಯ. ಪ್ರವಾಸಕ್ಕೆ ತೆರಳಿದ್ದವರನ್ನು ಉಗ್ರರು ಅಮಾನುಷವಾಗಿ ಹತ್ಯೆ ಮಾಡಿರುವುದು ಹೇಯ ಕೃತ್ಯ. ಇಂತಹ ದಾಳಿಯಿಂದ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರಬಹುದು ಎಂದು ಭಾವಿಸಿದವರು ಮೂರ್ಖರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ೩೭೦ನೇ ವಿಧಿ ರದ್ದಾದ ನಂತರ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ನೆರೆಯ ಪಾಕಿಸ್ತಾನಕ್ಕೆ ಇದನ್ನು ಸಹಿಸಲು ಆಗುತ್ತಿಲ್ಲ. ದಿವಾಳಿ ಎದ್ದಿರುವ ಪಾಕಿಸ್ತಾನ ಸರ್ಕಾರ ಅಲ್ಲಿನ ಜನರ ಮನಸ್ಸು ಬೇರೆಡೆ ತಿರುಗಿಸಲು ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರದ ಜತೆ ಕಾಶ್ಮೀರದ ಜನ ನಿಲ್ಲಬೇಕು ಎಂದರು.

ಮುಖಂಡ ಅಶೋಕ್ ಜೀರೆ ಮಾತನಾಡಿ, ದೇವರ ಹೆಸರಿನಲ್ಲಿ ಜನರನ್ನು ಕೊಲ್ಲುವುದನ್ನು ಯಾವ ಧರ್ಮವೂ ಬೆಂಬಲಿಸುವುದಿಲ್ಲ. ಇದು ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದನ ಕೃತ್ಯ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಆರ್ಥಿಕ ಚಟುವಟಿಕೆ ವೃದ್ಧಿಸಿತ್ತು. ಈ ಬೆಳವಣಿಗೆ ಸಹಿಸಲಾಗದ ಉಗ್ರರು ದಾಳಿ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದರು.

ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ, ಪ್ರಮುಖರಾದ ಕೆ.ಎಸ್. ರಾಘವೇಂದ್ರ, ಗೌಳಿ ಬಸವರಾಜ್, ರಾಜೇಶ್ ಸತ್ಯನಾರಾಯಣ, ದೇವಲಾಪುರ ಚಂದ್ರು, ಹೊನ್ನೂರಪ್ಪ ಇತರರಿದ್ದರು.