ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಲ್ಲಿ ಕೇಂದ್ರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

| Published : Jul 17 2024, 12:59 AM IST

ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಲ್ಲಿ ಕೇಂದ್ರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನಲ್ಲಿ ಪ್ರತಿಭಟನಾ ಮೆರವಣಿಗೆ, ಸಮಾವೇಶ ನಡೆಸಲಾಯಿತು. ಸಂಸದ ಜಿ.ಕುಮಾರ ನಾಯಕಗೆ ಮನವಿ. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಹೋರಾಟ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಜೂರು ಮಾಡುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ರಾಯಚೂರು ನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ಕಳೆದ 796 ದಿನಗಳಿಂದ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಮಂಗಳವಾರ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಧರಣಿ ಸ್ಥಳಕ್ಕೆ ಆಗಮಿಸಿ, ಸಮಾವೇಶವನ್ನು ನಡೆಸಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಂಸದ ಜಿ.ಕುಮಾರ ನಾಯಕಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಸದರು, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಸಂಸತ್ತಿನಲ್ಲಿ ಕೇಂದ್ರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಭಾಗದ ಆರೋಗ್ಯ ಜೀವನಕ್ಕೆ ಏಮ್ಸ್ ಅಗತ್ಯವಿದ್ದು, ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಏಮ್ಸ್ ಸ್ಥಾಪನೆಯಿಂದ ಜನರ ಆರೋಗ್ಯ ಜೀವನ ಮತ್ತಷ್ಟು ಸುಧಾರಿಸಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಏಮ್ಸ್‌ ನೀಡಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದ್ದು, ಮೊದಲ ಆದ್ಯತೆ ಮೇರೆಗೆ ಏಮ್ಸ್‌ ಈಡೇರಿಸಲು ಶ್ರಮಿಸಲಾಗುವುದು ಎಂದರು.

ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಮಾತನಾಡಿ, ಧಾರವಾಡ ಜಿಲ್ಲೆಯ ರಾಜಕೀಯ ನಾಯಕರ ಕುತಂತ್ರದಿಂದ ಹಿಂದುಳಿದ ರಾಯಚೂರು ಜಿಲ್ಲೆಗೆ ಐಐಟಿ ವಂಚಿತವಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆಯ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯೂ ಸೇರಿದ್ದು ಇಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ 796 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಎರಡು ಬಾರಿ ಪತ್ರ ಬರೆದಿದ್ದಾರೆ. ಈಚೆಗೆ ಖುದ್ದಾಗಿ ಪ್ರಧಾನಮಂತ್ರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಮುಂಬರುವ ಬಜೆಟ್ ಅಧಿವೇಶನದಲ್ಲಿ ಏಮ್ಸ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

ಏಮ್ಸ್ ಹೋರಾಟವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಸ್ತರಿಸಿದ್ದು, ರಾಯಚೂರು ಜೊತೆಗೆ ಈ ಭಾಗದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ್ದು, ಬಜೆಟ್ ಅಧಿವೇಶನದಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡದಿದ್ದರೆ ಆ.6 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಸಹ ಸಂಚಾಲಕರಾದ ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ ಕಾತರಕಿ, ಎಂ.ಆರ್‌.ಭೇರಿ, ವಿನಯ ಕುಮಾರ, ಅನಿತಾ ಬಸವರಾಜ, ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ಸಾವಿತ್ರಿ ಪುರುಷೋತ್ತಮ, ಜಗದೀಶ್ ಗುಪ್ತಾ ಸೇರಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಇದ್ದರು.