ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮಾಡಿ ಹಿಂದೂ ಧಾರ್ಮಿಕ ಕ್ಷೇತ್ರ ಹಾಗೂ ಡಾ.ವೀರೇಂದ್ರ ಹೆಗಡೆಯವರಹೆಸರಿಗೆ ಕಳಂಕ ತರುವ ಕೃತ್ಯ ಖಂಡಿಸಿ, ಧರ್ಮಸ್ಥಳ ಹಿತರಕ್ಷಣ ಸಮಿತಿ ಹಾಗೂ ವಿವಿಧ ಮಠಾಧೀಶರು, ರಾಜಕಾರಣಿಗಳು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಮೌನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುಂಚಿತವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೇ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಗೊಂಡು ಬೃಹತ್ ಮೆರವಣಿಗೆ ರ್‍ಯಾಲಿ ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ್, ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಆವರಣದ ಬಳಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು, ಹಿಂದೂ ಸಮಾಜದ ಮುಖಂಡರು, ರಾಜಕಾರಣಿಗಳು, ಜನಪ್ರತಿನಿಧಿಗಳು ಸೇರಿದಂತೆ ನಾನಾ ಸಂಘಟನೆಗಳ ಪದಾಧಿಕಾರಿಗಳು,ಕಾರ್ಯಕರ್ತರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ದೇಶದಲ್ಲಿ ರಾಜಕಾರಣ ಮಾಡುವುದು ಸರ್ವೇಸಾಮಾನ್ಯ. ಆದರೆ, ಧರ್ಮದ ಜೊತೆಗೆ ರಾಜಕಾರಣ ಮಾಡುತ್ತಿರುವುದು ಇತಿಹಾಸದಲ್ಲಿಯೇ ಕರ್ನಾಟಕದಲ್ಲಿ ಮೊದಲು. ಪ್ರತಿನಿತ್ಯ ರಾಜ್ಯ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಪವಿತ್ರ ಧರ್ಮಸ್ಥಳಕ್ಕೆ ಬಂದು, ಶ್ರೀಮಂಜುನಾಥ ದೇವರ ಆಶೀರ್ವಾದ ಪಡೆಯುತ್ತಾರೆ. ಇಂತಹ ಸುಕ್ಷೇತ್ರದ ಹೆಸರಿಗೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಯವರಿಗೆ ಕಳಂಕ ತರವ ಉದ್ದೇಶದಿಂದ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ನಾವು ಇದನ್ನು ಒಪ್ಪೋದಿಲ್ಲ. ನಾನು, ನಮ್ಮ ಎಲ್ಲ ಮಠಾಧೀಶರು, ಸಮಾಜ ಸೇರಿದಂತೆ ಇಡೀ ಭಾರತ ದೇಶ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ವೀರೇಂದ್ರ ಹೆಗಡೆಯವರ ಪರವಾಗಿ ಇದೆ. ಯಾರಿಂದಲೂ ನಮ್ಮ ಧರ್ಮಕ್ಕೆ ಹಾಗೂ ಧರ್ಮ ಕ್ಷೇತ್ರಕ್ಕೆ ಕಳಂಕ ತರಲು ಸಾಧ್ಯವಿಲ್ಲ ಎಂದು ಗುಡುಗಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ದೇಶ ಮತ್ತು ಕರ್ನಾಟಕದ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳ. ಅದಕ್ಕೆ 800 ವರ್ಷಗಳ ಇತಿಹಾಸ ಇದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಯಾರೋ ಒಬ್ಬ ಅನಾಮಿಕನ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದಾಗ ಹಿಂದೂ ಧರ್ಮವನ್ನು ಮತ್ತು ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸುವುದರ ಜೊತೆಗೆ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಹೀಗಾಗಿ ಸರ್ಕಾರ ಇಡಿ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.ಧರ್ಮಸ್ಥಳ ಹಾಗೂ ಡಾ.ವೀರೇಂದ್ರ ಹೆಗಡೆ ಅವರು ಯಾವುದೇ ವರ್ಗಕ್ಕೆ ಹಾಗೂ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಹಿಂದೂ ಸಮಾಜದ ಆರಾಧ್ಯ ಗುರುಗಳು. ಅಲ್ಲದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಶ್ರೀಗಳು ಕಾರಣರಾಗಿದ್ದಾರೆ. ಅಂತಹ ಧರ್ಮ ಗುರುಗಳು ಹಾಗೂ ಧರ್ಮಕ್ಷೆತ್ರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೆಳಗಾವಿಯಲ್ಲಿ ನಡೆದ ಈ ಹೋರಾಟ ಪ್ರಾರಂಭ ಮಾತ್ರ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ ಬೆಂಗಳೂರಿನವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಯಾವುದೇ ಜಾತಿ, ಮತ, ಧರ್ಮ ಪಂಗಡಕ್ಕೆ ಸೀಮಿತವಲ್ಲ. ಅಂತಹ ಪುಣ್ಯಕ್ಷೇತ್ರಕ್ಕೆ ಹಾಗೂ ಧರ್ಮಕ್ಕೆ ಅನ್ಯಾಯ ಮಾಡುವ ಕೆಲಸವಾಗುತ್ತಿದೆ. ತಪ್ಪುಮಾಡಿದವರಿಗೆ ಧರ್ಮಸ್ಥಳ ಮಂಜುನಾಥ ಶಿಕ್ಷೆ ಕೊಟ್ಟೆ ಕೊಡುತ್ತಾನೆ. ಡಾ.ವೀರೇಂದ್ರ ಹೆಗಡೆಯವರು ಕೃಷಿ ಹೆಚ್ಚಿನ ಆದ್ಯತೆ ಕೊಟ್ಟು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅಪರೂಪದ ವ್ಯಕ್ತಿ ಅಂತಹವರ ವಿರುದ್ಧ ಅಪಪ್ರಚಾರ ಮಾಡುವುದು ಯೋಗ್ಯವಲ್ಲ ಎಂದರು.ರಾಜ್ಯ ಸರ್ಕಾರ ಧರ್ಮ ರಕ್ಷಣೆಗಾಗಿ ಹೊಸ ಕಾನೂನು ರೂಪಿಸಬೇಕು. ಅಲ್ಲದೆ, ಮುಖ್ಯವಾಗಿ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿಯೂ ಧರ್ಮ ರಕ್ಷಕರು ತಯಾರಾಗಬೇಕು ಅಂದಾಗ ಮಾತ್ರ ಧರ್ಮ ರಕ್ಷಣೆಯಾಗುತ್ತದೆ ಎಂದರು.ಪ್ರತಿಭಟನೆಯಲ್ಲಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಗುರುಶಾಂತೇಶ್ವರ ಹಿರೇಮಠ ಸ್ವಾಮೀಜಿಗಳು, ಸಂಪಾದನಾ ಮಹಾಸ್ವಾಮಿಗಳು, ನೀಲಕಂಠ ಮಹಾಸ್ವಾಮಿಗಳು, ಗಂಗಾಧರ ಮಹಾಸ್ವಾಮಿಗಳು ಹಾಗೂ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಶಾಸಕ ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡ್ಡಗೌಡರ, ಅನಿಲ ಬೆನಕೆ, ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲೆಯ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಬೆಳೆಯುವವರನ್ನು ಕಾಲು ಎಳೆಯುವ ಹಾಗೆ ಧರ್ಮದಲ್ಲಿ ಬೆಳೆಯುತ್ತಿರುವ ಡಾ.ವೀರೇಂದ್ರ ಹೆಗಡೆಯವರ ಹೆಸರಿಗೆ ಮಸಿ ಬಳಿಯುವ ಕುತಂತ್ರ ನಡೆದಿದೆ. ಸರ್ಕಾರ ಈ ಬಗ್ಗೆ ಯೋಚಿಸಬೇಕಿತ್ತು. ಹಿಂದಿನ ಕಾಲದಲ್ಲಿ ಕಾಶಿ ಕ್ಷೇತ್ರದಲ್ಲಿಯೇ ಮರಣ ಹೊಂದಬೇಕೆಂಬ ಇಚ್ಛೆಯಿಂದ ಅಲೆಯೇ ಹೋಗಿ ವರ್ಷಗಟ್ಟಲೇ ಉಳಿದಿರುವ ಉದಾಹರಣೆಗಳಿವೆ. ಅದರಂತೆ ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮರಣ ಹೊಂದಲು ಹೋಗಿರುವ ಸಾಕಷ್ಟು ಜನರ ಬಗ್ಗೆ ಕೇಳಿದ್ದೇವೆ. ಹೀಗಿರುವಾಗ ಈಗ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಸರಿಯಲ್ಲ. ರಾಜ್ಯ ಸರ್ಕಾರ ನಮ್ಮ ಹೋರಾಟ ಗಮನಿಸಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಧರ್ಮ ಕೆಡಿಸುವ ಕೆಲಸ ಮಾಡಬಾರದು.
-ಡಾ.ಪ್ರಭಾಕರ ಕೋರೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ.