ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಕಾರ್ಯಕರ್ತರು ಪುರಸಭೆ ಮುಂಭಾಗ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿರುವ ಇ.ಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನಾಕಾರರು ಕೆಲ ಕಾಲ ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ತಾಲೂಕ ಕಚೇರಿವರೆಗೆ ಮೆರವಣಿಗೆ ನಡೆಸಿದ ನಂತರ ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಧರಣಿ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಸುರೇಶ್ ಕಂಠಿ ಮಾತನಾಡಿ, ಗೃಹ ಸಚಿವ ಪರಮೇಶ್ವರ್ ತಮ್ಮ ತಂದೆ ಕಾಲದಿಂದಲೂ ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ರಾಜ್ಯದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ವಿದ್ಯೆದಾನ ಮಾಡುತ್ತಾ ಬಂದಿದೆ. ಆದರೆ,ಕೇಂದ್ರ ಸರ್ಕಾರ ಪರಮೇಶ್ವರ್ ಅವರ ರಾಜಕೀಯ ಏಳಿಗೆಯನ್ನು ಸಹಿಸದೆ ಮುಖ್ಯಮಂತ್ರಿ ರೇಸ್ ನಲ್ಲಿರುವ ಪರಮೇಶ್ವರ ಗೌರವಕ್ಕೆ ದಕ್ಕೆ ತರುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ ಮಾಡಿಸಿ ಕೇಂದ್ರದ ಬಿಜೆಪಿ ಸರ್ಕಾರ ಅವರನ್ನು ಬೆದರಿಸಲು ಹೊರಟಿದೆ ಎಂದರು.
ಕೂಡಲೇ ರಾಜಕೀಯ ಪ್ರೇರಿತ ಇಡಿ ದಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಪ್ರತಿಭಟನಾಕಾರರು ತಾಲೂಕು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಸುರೇಶ್, ಕಾಂಗ್ರೆಸ್ ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವನಿತಾ, ಸದಸ್ಯ ಪ್ರಮೀಳಾ, ಮುಖಂಡರಾದ ಪುಟ್ಟಸ್ವಾಮಿ. ಹುಲಿಗೆರೆಪುರ ಮಹಾದೇವ, ರಾಜೇಶ್, ಸಿದ್ದರಾಜು, ಆಲೂರು ಕುಮಾರ್, ಮರಿದೇವರು, ಕೆಸ್ತೂರು ಈಶ್ವರ್, ಪ್ರಸನ್ನ ಮತ್ತಿತರರು ಭಾಗವಹಿಸಿದ್ದರು.