ಸಾರಾಂಶ
ಹುಬ್ಬಳ್ಳಿಯಲ್ಲಿ ಕಬ್ಬಲಿಗ ಸಮುದಾಯದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿ ಯುವಕನನ್ನು ಬಂಧಿಸಿ ಗಲ್ಲಿಗೇರಿಸಲು ಆಗ್ರಹ.
ಕನ್ನಡಪ್ರಭ ವಾರ್ತೆ ಸುರಪುರ
ಹುಬ್ಬಳ್ಳಿಯಲ್ಲಿ ಕಬ್ಬಲಿಗ ಸಮುದಾಯದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿ ಯುವಕನನ್ನು ಬಂಧಿಸಿ ಗಲ್ಲಿಗೇರಿಸಬೇಕು ಹಾಗೂ ಯುವತಿಯ ಬಡ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಸದಸ್ಯರು ಒತ್ತಾಯಿಸಿ ಶುಕ್ರವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಮುಖಂಡರು, ಹುಬ್ಬಳ್ಳಿ ನಗರದ ವೀರಾಪುರ ಓಣಿಯಲ್ಲಿರುವ ಮನೆಯೊಳಗೆ ನುಗ್ಗಿ ಕಬ್ಬಲಿಗೆ ಸಮಾಜದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಬರ್ಬರ ಕೊಲೆಗೈದು ಪರಾರಿಯಾಗಿರುವ ಯುವಕನನ್ನು ಕೂಡಲೇ ಬಂಧಿಸಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ. ಈ ರೀತಿ ಮಾಡುವುದಕ್ಕೆ ಅವಕಾಶ ನೀಡದೆ ತಕ್ಷಣವೇ ಆರೋಪಿಯನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ವಕೀಲ ನಂದಣ್ಣ ಬಾಕ್ಲಿ, ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡ, ಸಂತೋಷಕುಮಾರ ಬಾಕ್ಲಿ ದೇವಾಪುರ, ದೊಡ್ಡಪ್ಪ ಮುದನೂರ, ವಿಶ್ವಮಿತ್ತ ಕಟ್ಟಿಮನಿ, ಶಿವಪ್ಪ ಕಟ್ಟಿಮನಿ, ಮರೆಪ್ಪ ವೆಂಕಟಪುರ, ವೆಂಕಟೇಶ ಪೋತ್ಲಕರ, ತಾಲೂಕು ಅಧ್ಯಕ್ಷ ದೇವಿಂದ್ರಪ್ಪಗೌಡ, ಪಾರಪ್ಪ, ವೆಂಕಟರೆಡ್ಡಿ ಭೋವಿಗಲ್ಲಿ, ದರ್ಶನ, ಭಾಗೇಶ ಏವೂರ, ಪ್ರಶಾಂತ ಜೈನಾಪುರ, ಆನಂದ ಮಾಚಿಗುಂಡಾಳ, ಯಲ್ಲಪ್ಪ ರತ್ತಾಳ, ವೆಂಕೋಬ ರತ್ತಾಳ ಸೇರಿದಂತೆ ಇತರರಿದ್ದರು.