ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ವಕೀಲರೊಬ್ಬರು ಶೂ ಎಸೆದು ಅವಮಾನ ಮಾಡಿದ ಘಟನೆಗೆ ಖಂಡನೆ ವ್ಯಕ್ತಪಡಿಸಿ ಗುರುವಾರ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಎಚ್.ಪಿ. ಲಕ್ಕಪ್ಪ ಮಾತನಾಡಿ, ಮುಖ್ಯ ನ್ಯಾಯಮೂರ್ತಿಯವರಿಗೂ, ನ್ಯಾಯಾಂಗಕ್ಕೂ ಅವಮಾನ ಮಾಡಿದ ವಕೀಲರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಿಐಟಿಯು ಮುಖಂಡರಾದ ಸೌಮ್ಯ ಮಾತನಾಡಿ, ಸಂವಿಧಾನದ ಮೇಲಿನ ನಿರಂತರ ದಾಳಿಗಳನ್ನು ಹಿಮ್ಮೆಟ್ಟಿಸಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಬೇಕು. ನ್ಯಾಯಾಂಗವನ್ನು ಹಣದ ಪ್ರಭಾವದಿಂದ ಬಳಕೆ ಮಾಡುವವರ ವಿರುದ್ಧ ಜನರು ಎಚ್ಚರಿಕೆಯಿಂದ ಇರಬೇಕೆಂದರು. ನಿಜವಾದ ಸಂವಿಧಾನ ಭಕ್ತರಾಗಿದ್ದರೆ ಜಾತ್ಯತೀತತೆಯನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವದಲ್ಲಿ ನಾನು ಒಬ್ಬನೇ ಪ್ರಧಾನಮಂತ್ರಿ ಎಂಬ ಧೋರಣೆ ಸರಿಯಲ್ಲ. ಜನರ ಪರ ಕಾಳಜಿ ಇದ್ದರೆ ಅನ್ಯಾಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ನಮ್ಮ ಹಕ್ಕು, ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡಿಕೊಳ್ಳಲು ಎಲ್ಲರೂ ಶಿಕ್ಷಣ ಪಡೆದು ಜಾಗೃತರಾಗಬೇಕು. ಸಂವಿಧಾನ ಉಳಿಯಬೇಕಾದರೆ ನಾವು ಒಗ್ಗಟ್ಟಿನಿಂದ ನಿಲ್ಲಬೇಕು. ದೇಶದ ಏಕತೆಯನ್ನು ಹಾಳುಮಾಡುವ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು. ಭಾರತವು ಸರ್ವಧರ್ಮ ಸಮನ್ವಯ ರಾಷ್ಟ್ರವಾಗಿ ಉಳಿಯುವುದು ಎಲ್ಲರ ಹೊಣೆ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರರಾದ ರಾಜಶೇಖರ್, ಎಚ್.ಪಿ. ಲಕ್ಕಪ್ಪ, ನಲ್ಲುಲ್ಲಿ ಈರಯ್ಯ, ಕಾಡಪ್ಪ, ರಾಜು ಗೊರೂರು, ವೀರೇಶ್ ವಳಲಹಳ್ಳಿ, ಬೈಕೆರೆ ದೇವರಾಜ್, ಕಲ್ಗನೆ ಪ್ರಶಾಂತ್, ಕುಮಾರಯ್ಯ, ಹೆನ್ನಲಿ ಶಾಂತಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಧರ್ಮ ಹೆನ್ನಲಿ, ವಕೀಲರಾದ ಕಲ್ಪನಾ ಕೀರ್ತಿ, ರಾಧಾಕೃ?, ಗಿರೀಶ್ ಕಲ್ಗಣಿ, ಹೋರಾಟಗಾರರಾದ ನಂದಿನಿ ಬಾಳ್ಳು, ರುದ್ರೇಶ್ ವಳಲಹಳ್ಳಿ, ಜಗದೀಶ್ ಹಡ್ಲಹಳ್ಳಿ, ಭೀಮ್ ಆರ್ಮಿಯ ಜಗದೀಶ್ ಮತ್ತು ಇತರರು ಉಪಸ್ಥಿತರಿದ್ದರು.