ದೇಶದಲ್ಲಿ ಸಂವಿಧಾನವೇ ಅಪಾಯದಲ್ಲಿ ಸಿಲುಕಿದೆ

ಕಾರಟಗಿ: ಸುಪ್ರೀಂ ಕೋಟ್೯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದು ಹಲ್ಲೆ ಮಾಡಲು ಮುಂದಾದ ದೇಶದ್ರೋಹಿ ವಕೀಲ ಯಾವುದೇ ಜಾತಿ ಧರ್ಮದವನಾದರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಈತನ ವಿರುದ್ಧ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಇಲ್ಲಿನ ಹೊಸ ಬಸ್ ನಿಲ್ದಾಣದ ಮುಂದೆ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆದಿರುವುದನ್ನು ಖಂಡಿಸಿದ್ದು, ತಹಸೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಮಿತಿ ಅಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ದೇಶದಲ್ಲಿ ಸಂವಿಧಾನವೇ ಅಪಾಯದಲ್ಲಿ ಸಿಲುಕಿದೆ.ಸಂವಿಧಾನ ಉಳಿಸುವ ಕೆಲಸ ದೇಶದ ಜನರು ಮಾಡಲೇಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನಕ್ಕೆ ಅಪಾಯ ತಂದೊಡ್ಡುವ ಮನಸ್ಸುಗಳ ವಿರುದ್ಧ ಹಗಲಿರುಳು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಬಾಬಾ ಸಾಹೇಬ್‌ ಅಂಬೇಡ್ಕರ್ ಹಾಕಿಕೊಟ್ಟ ಬುನಾದಿಯ ಮೇಲೆ ಚಲಿಸಿದ್ದೇ ಆದಲ್ಲಿ ದೇಶಾದ್ಯಂತ ಅಶಾಂತಿ ಮೂಡಿಸುವಂತಹ ಕೈ ಕಟ್ಟಿಹಾಕಬಹುದು ಎಂದು ಅಭಿಪ್ರಾಯಪಟ್ಟ ಅವರು, ಸಿಜೆಐ ಮೇಲೆ ಶೂ ಎಸೆದ ದುಷ್ಟ ವಕೀಲ ರಾಕೇಶ್ ಕಿಶೋರ್ ಉದ್ದೇಶ ದೇಶದ್ರೋಹಿ ನಡೆಯಾಗಿದ್ದು, ಕೂಡಲೇ ಸರ್ಕಾರ ತನನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘಟನೆ ಮರಿಸ್ವಾಮಿ ಬರಗೂರು ಮಾತನಾಡಿ,ಕೋಮುವಾದಿ ಮನಸ್ಸುಳ್ಳ ವಕೀಲ ರಾಕೇಶ್ ಕಿಶೋರ್ ಎಂಬಾತ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮೇಲೆ ಎಸೆದಿರುವುದನ್ನು ಇಡೀ ದೇಶ ಖಂಡಿಸಿದೆ. ಇದು ಕೋಮುವಾದಿ, ಸನಾತನಿಗಳ ಬೆಂಬಲದಿಂದ ನಡೆದ ದ್ರೋಹದ ಕೃತ್ಯ. ಇದು ನ್ಯಾಯಾಧೀಶರ ಮೇಲೆ ನಡೆದ ಹಲ್ಲೆ ಪ್ರಯತ್ನವಷ್ಟೇ ಅಲ್ಲ,ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಾದ ದೌರ್ಜನ್ಯ ಎಂದು ಆಕ್ರೋಶ ಹೊರಹಾಕಿದರು.

ಅಜ್ಮೀರ್ ಸಿಂಗನಾಳ, ನಾಗರಾಜ್ ಮಾತನಾಡಿದರು. ಪ್ರತಿಭಟನಾ ಮೆರವಣಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹೊರಟು ಬಸ್ ನಿಲ್ದಾಣದವರೆಗೆ ನಡೆಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಕಚೇರಿಯ ಶಿರಸ್ಥೇದಾರಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೀಲಪ್ಪ ಡಣಾಪುರ, ಹುಲಗೇಶ ಬುಕ್ಕನಟ್ಟಿ, ದ್ಯಾಮಣ್ಣ ಮ್ಯಾಗಡೆ, ಸುಮಿತ್ರ ಗಂಗಾವತಿ, ಮರಿಸ್ವಾಮಿ ಹೊಸಕೇರಿ, ದೇವದಾಸ್, ತಾಯಪ್ಪ ಗುಂಡೂರು, ತಿಮ್ಮಣ್ಣ ಗುಂಡೂರು, ಲಕ್ಷ್ಮಣ್ ಮ್ಯಾಗಡಮನಿ, ಮುತ್ತಣ್ಣ ಸಿದ್ದಾಪುರ, ಬಸವರಾಜ್ ಬಸವಣ್ಣಕ್ಯಾಂಪ್, ಮರಿಸ್ವಾಮಿ ಗುಂಡೂರು, ಖಾಜಾ ಹುಸೇನ್ ಮುಲ್ಲಾ, ಮರಿಯಪ್ಪ ಸಾಲೋಣಿ ಇದ್ದರು. ಫೋಟೋ ೧೫ಕೆಅರ್ಟಿ-೩

ಕಾರಟಗಿಯಲ್ಲಿ ದಲಿತ ಸಂಘಟನೆಗಳು ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣಕ್ಕೆ ಸಂಬಂಧ ವಕೀಲನನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.