ಸಾರಾಂಶ
ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿಗಳ ಕೃತ್ಯ ಮುಸ್ಲಿಂ ಸಮಾಜದ ವತಿಯಿಂದ ಖಂಡಿಸುತ್ತೇವೆ
ಹೊಸಪೇಟೆ: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ಭಯೋತ್ಪಾದಕ ದಾಳಿ ಖಂಡಿಸಿ ನಗರದ ಜೈ ಭೀಮ್ ವೃತ್ತದಲ್ಲಿ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿ ಹಾಗೂ ಮುಸ್ಲಿಂ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷ ಎಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿಗಳ ಕೃತ್ಯ ಮುಸ್ಲಿಂ ಸಮಾಜದ ವತಿಯಿಂದ ಖಂಡಿಸುತ್ತೇವೆ. ಕೆಲವೊಂದು ಮಾಧ್ಯಮಗಳು ಹಾಗೂ ಕೆಲ ರಾಜಕಾರಣಿಗಳು ಜಾತಿ, ಧರ್ಮ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುತ್ತಾರೆ. ಹಿಂದೂ-ಮುಸ್ಲಿಮರ ನಡುವಿನ ಸಾಮರಸ್ಯ ಹಾಳು ಮಾಡುತ್ತಿರುತ್ತಾರೆ. ಉಗ್ರಗಾಮಿಗಳಿಗೆ ಯಾವುದೇ ಜಾತಿ, ಮತ, ಪಂಥ ಇಲ್ಲ. ಉಗ್ರಗಾಮಿಗಳಿಗೆ ಉಗ್ರವಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ವಿಶ್ವದಲ್ಲಿಯೇ ಭಾರತ ಸರ್ವಧರ್ಮಗಳ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಶಾಂತಿ ಕದಡುವ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಉಗ್ರಗಾಮಿಗಳಿಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕು. ಉಗ್ರಗಾಮಿಗಳ ದಾಳಿಗೆ ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಎಲ್ಲ ಕುಟುಂಬದವರಿಗೂ ದುಃಖ ಭರಿಸಲು ಶಕ್ತಿ ನೀಡಲು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಮುಖಂಡರಾದ ನಾಜಿಮ್, ಫಜಲುಲ್ಲಾ, ದಾದಾಪೀರ್ ಎಂ.ಎಂ, ಫೈರೋಜ್ ಖಾನ್, ಅಬೂಬಕ್ಕರ್ ಅಶ್ರಫಿ, ಡಾ.ದರ್ವೇಶ್ ಮೈನುದ್ದಿನ್, ಗುಲಾಮ್ ರಸೂಲ್, ಖಾದರ್ ರಫಾಯಿ, ಮಸೀದಿಗಳ ಅಫೀಸಾಬ್, ಸಮಾಜದ ಹಿರಿಯ ಮುಖಂಡರು, ಯುವಕರು ಭಾಗವಹಿಸಿದ್ದರು.