ಜಲ್ಲಿ ಕ್ರಷರ್ ಮಾಲೀಕರಿಂದ ರೈತರ ಮೇಲೆ ದೌರ್ಜನ್ಯ

| Published : Jul 05 2025, 12:18 AM IST

ಸಾರಾಂಶ

ಮಾಗಡಿ: ದುಬ್ಬಗಟ್ಟಿಗೆ ಗ್ರಾಮದಲ್ಲಿರುವ ಜಲ್ಲಿ ಕ್ರಷರ್ ಮಾಲೀಕರು ನಮ್ಮ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಾತ್ರೋರಾತ್ರಿ ಜಮೀನಿನಲ್ಲಿರುವ ಬಂಡೆಗಳನ್ನು ಸ್ಫೋಟಗೊಳಿಸುತ್ತಿದ್ದಾರೆ ಎಂದು ಮಡಿವಾಳರಪಾಳ್ಯ ಮತ್ತು ಮೋಟೇಗೌಡನ ಪಾಳ್ಯದ ರೈತರು ಪ್ರತಿಭಟನೆ ನಡೆಸಿದರು.

ಮಾಗಡಿ: ದುಬ್ಬಗಟ್ಟಿಗೆ ಗ್ರಾಮದಲ್ಲಿರುವ ಜಲ್ಲಿ ಕ್ರಷರ್ ಮಾಲೀಕರು ನಮ್ಮ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಾತ್ರೋರಾತ್ರಿ ಜಮೀನಿನಲ್ಲಿರುವ ಬಂಡೆಗಳನ್ನು ಸ್ಫೋಟಗೊಳಿಸುತ್ತಿದ್ದಾರೆ ಎಂದು ಮಡಿವಾಳರಪಾಳ್ಯ ಮತ್ತು ಮೋಟೇಗೌಡನ ಪಾಳ್ಯದ ರೈತರು ಪ್ರತಿಭಟನೆ ನಡೆಸಿದರು.

ಈ ವೇಳೆ ಕ್ರಷರ್ ಮಾಲೀಕರ ದೌರ್ಜನ್ಯಕ್ಕೆ ಒಳಗಾದ ಮಡಿವಾಳರಪಾಳ್ಯದ ನೀಲಮ್ಮ ಮಾತನಾಡಿ, ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದುಬ್ಬಗಟ್ಟಿಗೆ ಗ್ರಾಮದ ಜೇನುಕಲ್ ಬೆಟ್ಟದ ಬಳಿ ನಮ್ಮ ಜಮೀನಿದ್ದು ನಾವು ಪರಿಶಿಷ್ಟ ಜಾತಿಗೆ ಸೇರಿದ್ದು ನಮ್ಮ ಹಿರಿಯರ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಜಲ್ಲಿ ಕ್ರಷರ್ ಸ್ಥಾಪನೆಯಾಗಿ ಅಂದಿನಿಂದ ಮಾಲೀಕರು ನಮ್ಮ ಜಮೀನಿನ ಕೆಳಭಾಗದಲ್ಲಿ ಬಂಡೆಗಳನ್ನು ಸಿಡಿಸಿಕೊಳ್ಳುತ್ತಿದ್ದರು. ವಾರದಿಂದ ನಮ್ಮ ಜಮೀನಿನಲ್ಲಿರುವ ಬಂಡೆಗಳಲ್ಲಿ ಸಿಡಿಮದ್ದುಗಳನ್ನು ಸಿಡಿಸಿದ್ದು ಬೆಳಗ್ಗೆ ಬಂದು ಸ್ಥಳದಲ್ಲಿದ್ದ ಕ್ರಷರ್ ಸಿಬ್ಬಂದಿಯನ್ನು ವಿಚಾರಿಸಿದಾಗ ಈ ಜಮೀನು ನಮಗೆ ಸೇರಿದ್ದು ನಿಮ್ಮ ಬಳಿ ದಾಖಲೆಯಿದ್ದರೆ ಪೊಲೀಸರಿಗೆ ದೂರು ನೀಡಿ ಎಂದು ದೌರ್ಜನ್ಯವೆಸಗಿದ್ದಾರೆಂದು ದೂರಿದರು. ದೌರ್ಜನ್ಯ ಕುರಿತು ತುರ್ತು ಸೇವೆಗೆ ಕರೆಮಾಡಿ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ನಮ್ಮ ಬಳಿ ಪಹಣಿ, ಮುಟೇಷನ್ ಜೊತೆಗೆ ಸಾಗುವಳಿ ಮಾಡುತ್ತಿದ್ದೇವೆ. ಆದರೂ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಮೋಟೇಗೌಡನ ಪಾಳ್ಯದ ಅಣ್ಣಯ್ಯ ಮಾತನಾಡಿ, ನಮಗೆ ದುಬ್ಬಗಟ್ಟಿಗೆ ಸರ್ವೆ ನಂ.47ರಲ್ಲಿ ಸುಮಾರು ಎರಡು ಎಕರೆ ಜಮೀನಿದ್ದು ನಮ್ಮ ಹೆಸರಲ್ಲಿ ಎಲ್ಲಾ ದಾಖಲೆಗಳಿದ್ದು, ಕ್ರಷರ್ ಮಾಲೀಕರು ನಮಗೆ ಯಾವುದೇ ಮಾಹಿತಿ ನೀಡದೆ ನಮ್ಮ ಜಮೀನನಲ್ಲಿಯೂ ಬಂಡೆಗಳನ್ನು ಸಿಡಿಸಿ ಅವರ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇವರು ಬಂಡೆಗಳನ್ನು ಸಿಡಿಮದ್ದುಗಳಿಂದ ಸ್ಪೋಟಿಸಿದ ಕಾರಣ ಗ್ರಾಮದಲ್ಲಿ ಈಗಾಗಲೆ ಕೊಳವೆ ಬಾವಿಗಳಿಗೆ ಹಾನಿಯಾಗಿ ಸ್ಥಗಿತಗೊಂಡಿವೆ. ಜೊತೆಗೆ ಗ್ರಾಮದಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಅಧಿಕಾರಿಗಳು ಪರಿಶೀಲಿಸಿ ಕ್ರಷರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಮಸ್ಥರಾದ ಮಂಜುನಾಥ್, ಕುಮಾರಯ್ಯ, ಶ್ರೀನಿವಾಸ, ರವಿ, ಕುಮಾರಸ್ವಾಮಿ, ಕೃಷ್ಣ, ಶ್ರೀಕಾಂತ, ಶಿವಕುಮಾರ್, ಶಡಾಕ್ಷರಿ, ರಾಮಚಂದ್ರಯ್ಯ, ತಗ್ಗೀಕುಪ್ಪೆ ವೇಣುಗೋಪಾಲ, ರಘುನಂದನ್, ಅಂಜನ್ ಕುಮಾರ್ ಇತರರಿದ್ದರು. (ಫೋಟೋ ಕ್ಯಾಪ್ಷನ್‌)

ಮಡಿವಾಳರಪಾಳ್ಯ ಮತ್ತು ಮೋಟೇಗೌಡನ ಪಾಳ್ಯದ ರೈತರ ಜಮೀನನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಬಂಡೆಗಳು ಸಿಡಿಸುತ್ತಿರುವ ಕ್ರಷರ್‌ ಮಾಲೀಕರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.