ಸಾರಾಂಶ
ನ್ಯಾಷಿನಲ್ ಹೆರಾಲ್ಡ್ ಪ್ರಕರಣ ಕೇವಲ ಕಾನೂನು ಪ್ರಕ್ರಿಯೆ ಅಲ್ಲ, ಬಿಜೆಪಿಯ ಸೇಡಿನ ರಾಜಕಾರಣವಾಗಿ ಮಾರ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಬಿಜೆಪಿ ಸರ್ಕಾರ ನ್ಯಾಷನಲ್ ಹೆರಾಲ್ಡ್ ಆಸ್ತಿಗಳನ್ನು ವಶಪಡಿಸಿಕೊಂಡು ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೊಟ್ಟಿ ದಾಖಲೆ ಸೃಷ್ಟಿಸಿ ಸೇಡಿನ ರಾಜಕಾರಣ ಮಾಡಲು ಹೊರಟಿರುವುದೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಹಾಗೂ ಕಾಂಗ್ರೆಸ್ ವಿರುದ್ಧ ಸೇಡಿನ ರಾಜಕಾರಣ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದೆ. ಬಡವರು, ಕೂಲಿ ಕಾರ್ಮಿಕರು ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರೆ, ವ್ಯಾಪಾರಿಗಳು ಜಿಎಸ್‌ಟಿ ಬರೆಗೆ ಸೋತು ಸುಣ್ಣವಾಗಿದ್ದಾರೆ. ಸರ್ಕಾರ ಬೆಲೆ ಏರಿಕೆ, ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳತ್ತ ಗಮನ ಕೊಡುವುದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನ್ಯಾಯವಾದಿ ಕೆ.ಎಫ್.ಅಂಕಲಗಿ ಮಾತನಾಡಿ, ನ್ಯಾಷಿನಲ್ ಹೆರಾಲ್ಡ್ ಪ್ರಕರಣದ ಮೂಲಕ ಕಾಂಗ್ರೆಸ್ ನಾಯಕರನ್ನು ಇದೊಂದು ರಾಜಕೀಯ ಪ್ರೇರಿತ, ಉದ್ದೇಶಪೂರ್ವಕ ಗುರಿಯಾಗಿಸಲಾಗಿದೆ. ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಬಿಜೆಪಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಾ ಇದೆ. ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನಾವು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ ಎಂದು ಗುಡುಗಿದರು.
ಕಾಂಗ್ರೆಸ್ ಮುಖಂಡ ಕೆ.ಎಫ್.ಅಂಕಲಗಿ, ವಿದ್ಯಾವತಿ ಅಂಕಲಗಿ, ಬಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಆಜಾದ ಪಟೇಲ, ಸುಭಾಷ ಕಾಲೇಬಾಗ, ಗಂಗಾಧರ ಸಂಬಣ್ಣಿ, ವಿಜಯಕುಮಾರ ಘಾಟಗೆ, ಆಫ್ತಾಬ ಕಾದ್ರಿ ಇನಾಮದಾರ, ಜಮೀರ ಬಕ್ಷಿ, ಶಾಹಜಾನ ಮುಲ್ಲಾ, ಗುರು ತಾರನಾಳ, ಸುರೇಶ ಹಾರಿವಾಳ, ಬಾಲನಗೌಡ ಪಾಟೀಲ, ಈರನಗೌಡ ಬಿರಾದಾರ, ಆರತಿ ಶಾಹಪೂರ, ಡಿ.ಎಚ್.ಕಲಾಲ, ಆನಂದ ಜಾಧವ, ಜಾಕೀರಹುಸೇನ ಮುಲ್ಲಾ, ಎಂ.ಎಂ.ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಇಲಿಯಾಸ ಸಿದ್ದೀಕಿ, ಶರಣಪ್ಪ ಯಕ್ಕುಂಡಿ, ಸಲೀಮ ಪೀರಜಾದೆ, ಮೊಯಿನ ಶೇಖ, ರಮೇಶ ಗುಬ್ಬೇವಾಡ, ಸಾಹೇಬಗೌಡ ಬಿರಾದಾರ, ವಿಜಯಕುಮಾರ ಕಾಳೆ, ರಾಜೇಶ್ವರಿ ಚೋಳಕೆ, ಫೈರೊಜ ಶೇಖ, ಚನ್ನಬಸಪ್ಪ ನಂದರಗಿ, ಬಿ.ಎಸ್.ಗಸ್ತಿ, ಕೃಷ್ಣಾ ಲಮಾಣಿ ಮುಂತಾದವರು ಇದ್ದರು.