ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರವಾದಿ ಮಹಮ್ಮದ್ ಪೈಗಂಬರ್‌ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಇದೀಗ ಮುಸ್ಲಿಂ ಸಮಾಜದ ಮುಖಂಡರೆಲ್ಲ ಹೋರಾಟಕ್ಕೆ ಅಣಿಯಾಗಿದ್ದೇವೆ. ಮುಸ್ಲಿಮರ ಬಗ್ಗೆ ಹಾಗೂ ನಮ್ಮ ಧರ್ಮಗುರುಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಯತ್ನಾಳ ವರ್ತನೆ ಖಂಡಿಸಿ ಏ.28ರಂದು ಬೆಳಗ್ಗೆ 11ಗಂಟೆಗೆ ನಗರದ ಡಾ.ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಯತ್ನಾಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಕೊಡಲಾಗುವುದು ಎಂದರು. ನಮಗೆ ನಿಂದಿಸಿದರೆ ಸಹಿಸಿಕೊಳ್ಳಬಹುದು, ಆದರೆ ಪೈಗಂಬರ್‌ಗೆ ನಿಂದಿಸಿದ್ದನ್ನು ಸಹಿಸಲಾಗದು. ಅವರ ಹೇಳಿಕೆ ಖಂಡಿಸಿ ಸರ್ಕಾರಕ್ಕೆ ಮನವಿ ಕೊಡಲಾಗುವುದು. ಮುಸ್ಲಿಂ ನಾಯಕರೆಲ್ಲ ಸೇರಿ ಜಾಯಿಂಟ್ ಆಕ್ಷನ್ ಕಮಿಟಿ ರಚಿಸಿದ್ದು, ಕಮಿಟಿಯಿಂದಲೇ ಈ ಹೋರಾಟ ನಡೆಯಲಿದೆ. ಅಂದು ನಗರದ ಎಲ್ಲ ವರ್ಗದ ಜನರೆಲ್ಲ ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕರೆ ಕೊಟ್ಟರು. ನಮ್ಮ ಆರಾಧ್ಯ ದೈವ ಎನಿಸಿಕೊಂಡಿರುವ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿದರೆ ನಾವು ಬಿಡೋದಿಲ್ಲ. ಕೆಸರಿನಲ್ಲಿ ಕಲ್ಲು ಹೊಡೆಯಬಾರದು ಎಂದು ಸುಮ್ಮನಿದ್ದೇವೆ ಎಂದು ಪರೋಕ್ಷವಾಗಿ ಯತ್ನಾಳ ಅವರಿಗೆ ಎಚ್ಚರಿಸಿದರು.
ಮುಖಂಡ ಮಹಮ್ಮದ ರಫೀಕ್ ಟಪಾಲ್ ಮಾತನಾಡಿ, ಶಾಸಕ ಯತ್ನಾಳ ಅವರು ಮಾತನಾಡಿದ್ದು ಜನರಿಗೆ ಬಹಳ ನೋವಾಗಿದೆ. ಪ್ರವಾದಿ ಅವರಿಗೆ ಮಾತನಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಅಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟ ನಡೆಯಲಿದೆ. ನಗರ ಶಾಸಕರಿಗೆ ಮತ ಹಾಕಿದವರು ಇದೀಗ ಪಶ್ಚಾತಾಪ ಪಡುವಂತಾಗಿದೆ. ಯತ್ನಾಳರು ನಗರ ಅಭಿವೃದ್ಧಿ ಮಾಡುವುದು ಬಿಟ್ಟು ಹೋದಲ್ಲೆಲ್ಲ ಮುಸ್ಲಿಂ ಬಗ್ಗೆ ಮಾತನಾಡ್ತಾರೆ. ಹೀಗಾಗಿ ಅವರ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಜಾಯಿಂಟ್ ಆಕ್ಷನ್ ಕಮಿಟಿ ರಚನೆ ಮಾಡಲಾಗಿದೆ. ಕಮಿಟಿ ಸಭೆಯಲ್ಲಿ ಚರ್ಚಿಸಿ ಹೋರಾಟ ಮಾಡಲಾಗುತ್ತಿದೆ. ಏ.28 ರಂದು ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ಹೋಗಲಿದೆಂದರು.ಯತ್ನಾಳ ಅವರೇ ನಿಮ್ಮ ವರ್ತನೆಯಿಂದಾಗಿಯೇ ನಿಮ್ಮ ಪಕ್ಷದಿಂದ ನಿಮ್ಮನ್ನು ಹೀನಾಯವಾಗಿ ತೆಗೆದು ಹಾಕಿದ್ದಾರೆ. ಇದೀಗ ನಿಮ್ಮಿಂದ ಕತ್ತಲಿನಲ್ಲಿ ಮುಖಂಡರ ಕೈಕಾಲು ಹಿಡಿದು ಮತ್ತೆ ಪಕ್ಷದ ಒಳಗೆ ಹೋಗುವ ಪ್ರಯತ್ನ ನಡೆದಿದೆ. ನೀವು ಪಕ್ಷ ಸೇರಲು ಮುಸ್ಲಿಮರನ್ನು ಮದ್ಯದಲ್ಲಿ ಎಳೆದು ತರಬೇಡಿ ಎಂದು ಎಚ್ಚರಿಸಿದರು. ಅಂದು ಪೈಗಂಬರ್ ಬಗ್ಗೆಯೇ ಅವಹೇಳನವಾಗಿ ಮಾತನಾಡಿದ್ದಲ್ಲದೇ ಇದೀಗ ನಾನು ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ ಅಲಿ ಜಿನ್ನಾ ಬಗ್ಗೆ ಮಾತಾಡಿದ್ದೇನೆ ಎಂದು ಸಮಜಾಯಿಸುತ್ತಿರಿ. ಹಾಗಾದರೆ ಜಿನ್ನಾ ಯಾಕೆ ನಿಮಗೆ ಬೇಜಾರಾದ?, ಜಿನ್ನಾ ನಿಮಗೇನು ಮಾಡಿದ್ದಾರೆ?. ಅವರ ಬಗ್ಗೆ ಯಾಕೆ ಮಾತನಾಡಬೇಕು ಎಂದು ಪ್ರಶ್ನಿಸಿದರು. ಸ್ವಂತ ಪಕ್ಷದಿಂದಲೇ ಮೂರು ಬಾರಿ ಉಚ್ಚಾಟನೆ ಆದವರು ನೀವು. ಮುಸ್ಲಿಂರ ಬಗ್ಗೆ ಮಾತನಾಡಿ ಏನು ಸುಧಾರಿಸುತ್ತಾರೋ ಗೊತ್ತಿಲ್ಲ. ಆದರೆ ಪೈಗಂಬರ್ ಮಾತನಾಡಿದ್ದಕ್ಕೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಇನ್ನೋರ್ವ ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ಯತ್ನಾಳರು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿದ್ದಕ್ಕೆ ಎಲ್ಲ ಕಡೆಗಳಲ್ಲಿ ಪ್ರಕರಣ ದಾಖಲಾಗಿವೆ. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಮುಶ್ರೀಫ್ ನೇತ್ರತ್ವದಲ್ಲಿ ಜಾಯಿಂಟ್ ಆಕ್ಷನ್ ಕಮಿಟಿ ರಚಿಸಲಾಗಿದೆ. 28ರಂದು ಪ್ರತಿಭಟನೆ ನಡೆಸಲಾಗುವುದು. ಯತ್ನಾಳರ ಮೇಲೆ ಕ್ರಮಕೈಗೊಳ್ಳಬೇಕು. ಮುಂದೆ ಹೀಗಾಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಪ್ರವಾದಿ ಬಗ್ಗೆ ಮಾತನಾಡಿದ್ದಕ್ಕೆ ಯತ್ನಾಳಗೆ ಹಿಂದೂ ಸಮಾಜದ ಜನರೇ ಛೀಮಾರಿ ಹಾಕಿದ್ದಾರೆ. ಮಹಮ್ಮದ್ ಪೈಗಂಬರ್ ಆಶೆಯದಂತೆ ನಮ್ಮಿಂದ ಬೇರೆಯವರಿಗೆ ತೊಂದರೆ ಆಗಬಾರದು ಎಂದು ಸೀಮಿತವಾದ ಸ್ಥಳದಲ್ಲಿ ನಗರದ ಜನರೊಂದಿಗೆ ಹೋರಾಟ ನಡೆಸಲಾಗುವುದು. ಜಿಲ್ಲೆಯ ಸಚಿವರಿಗೆ, ಶಾಸಕರಿಗೆ ಈ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ.ರೌಡಿ ಶೀಟರ್ ತೆರೆಯಿರಿ:
ಯಾರ ಮೇಲಾದರೂ ಮೂರಕ್ಕಿಂತಲೂ ಹೆಚ್ಚು ಕ್ರಿಮಿನಲ್ ಕೇಸ್‌ಗಳು ಇದ್ದರೆ ಅಂತಹವರ ಮೇಲೆ ರೌಡಿಶೀಟರ್ ಓಪನ್ ಮಾಡಬೇಕು ಎಂಬ ನಿಯಮವಿದೆ. ಯತ್ನಾಳರ ಮೇಲೆಯೂ ಸಾಕಷ್ಟು ಕ್ರಿಮಿನಲ್ ಕೇಸ್‌ಗಳು ಇರುವುದರಿಂದ ಅವರ ಮೆಲೆಯೂ ರೌಡಿಶೀಟರ್ ಓಪನ್ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗ್ಮಾರೆ, ಮುಖಂಡರಾದ ಫಯಾಜ್ ಕಲಾದಗಿ, ಮೈನೂದ್ದೀನ್ ಬೀಳಗಿ ಉಪಸ್ಥಿತರಿದ್ದರು.