ಸಾರಾಂಶ
ಕುಷ್ಟಗಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವುದು ಖಂಡನಿಯ ಎಂದು ಪಂಚಮಸಾಲಿ ಸಮಾಜದ ಮುಖಂಡ ವೀರೇಶ ನಾಲತವಾಡ ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಮತ್ತು ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಬಿಜೆಪಿ ಪಕ್ಷದಿಂದ ಬಸನಗೌಡ ಯತ್ನಾಳ ಉಚ್ಚಾಟನೆ ಮಾಡಿರುವ ಕ್ರಮ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷ ಸಂಘಟನೆ ಮಾಡದೇ ಕೇವಲ ಹುದ್ದೆ ಅಲಂಕರಿಸಿ ಕುಳಿತಿದ್ದಾರೆ. ಆದರೆ ಬಸನಗೌಡ ಪಾಟೀಲ್ ಯತ್ನಾಳ ಅಭಿವೃದ್ಧಿಗಾಗಿ ಧ್ವನಿ ಎತ್ತುವ ನಾಯಕ. ಅಂತವರನ್ನು ಉಚ್ಚಾಟನೆ ಮಾಡಿರುವುದು ಅನ್ಯಾಯದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಿದ್ದರೆ ಬಸನಗೌಡ ಯತ್ನಾಳ ಅವರನ್ನು ಮರಳಿ ಪಕ್ಷಕ್ಕೆ ಕರೆ ತರಬೇಕು ಎಂದರು.
ನಂತರ ಯುವ ನಾಯಕ ಚನ್ನಪ್ಪ ನಾಲತ್ವಾಡ, ವಿಜಯಕುಮಾರ ಸಾಸ್ವಿಹಾಳ, ನಾರಾಯಣಸಿಂಗ್ ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆಗೆ ಪೂಜೆ ನೆರವೇರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ರಸ್ತೆ ಮೂಲಕ ಬಿಜೆಪಿ ಕೇಂದ್ರ ನಾಯಕರು ಮತ್ತು ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಘೋಷಣೆ ಕೂಗುತ್ತಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನೆ ನಡೆಸಿದರು. ನಂತರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ, ಟೈಯರ್ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸನಗೌಡ ಓಲಿ, ವಿರೇಶ ನಾಲತ್ವಾಡ, ಚೆನ್ನಪ್ಪ ನಾಲತ್ವಾಡ, ಆದೇಶ ರಾಮತ್ನಾಳ, ಅಮರೇಶ ನಾಲತ್ವಾಡ, ಅಮರೇಶ ಕಾರಟಗಿ, ಸಂಗಪ್ಪ ಗುರಿಕಾರ, ದೊಡ್ಡಬಸವ ನವಲಹಳ್ಳಿ, ಚಂದ್ರು ಕುಲಕರ್ಣಿ, ದೊಡ್ಡಪ್ಪ ನಾರಿನಾಳ, ದೇವೇಂದ್ರ ಸಂಗಟಿ ಮತ್ತು ವಿವಿಧ ಸಮಾಜಗಳ ಪ್ರಮುಖರು, ಹಿಂದು ಪರಸಂಘಟನೆಗಳ ಸದಸ್ಯರು, ಪಂಚಮಸಾಲಿ ಪ್ರಮುಖರು, ಯುವಕರು ಇದ್ದರು.ಪೋಟೊ9.4: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು.