ಸಾರಾಂಶ
ದೊಡ್ಡ ಗಡಿಯಾರ ಕಾಮಗಾರಿಗೆ ಈ ಹಿಂದೆ ಬಳಸಿದ್ದ ಸುಣ್ಣ, ನದಿ ಮರಳು ಬಳಸದೆ ಎಂ ಸ್ಯಾಂಡ್ ಮತ್ತು ಸಿಮೆಂಟ್ ಬಳಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೃದಯ ಭಾಗದಲ್ಲಿನ ದೊಡ್ಡ ಗಡಿಯಾರ ದುರಸ್ತಿಯಲ್ಲಿ ಹಗರಣ ನಡೆಯುತ್ತಿದೆ ಎಂದು ಆರೋಪಿಸಿ ಗಂಧದಗುಡಿ ಫೌಂಡೇಷನ್ ಪದಾಧಿಕಾರಿಗಳು ಬುಧವಾರ ಪ್ರತಿಭಟಿಸಿದರು.ದೊಡ್ಡ ಗಡಿಯಾರ ಕಾಮಗಾರಿಗೆ ಈ ಹಿಂದೆ ಬಳಸಿದ್ದ ಸುಣ್ಣ, ನದಿ ಮರಳು ಬಳಸದೆ ಎಂ ಸ್ಯಾಂಡ್ ಮತ್ತು ಸಿಮೆಂಟ್ ಬಳಸಲಾಗುತ್ತಿದೆ. ಅರಮನೆ ಸುತ್ತಮುತ್ತಲ ಕರಿಕಲ್ಲು ತೊಟ್ಟಿ ಅಭಿವೃದ್ಧಿಗೆ ನದಿ ಮರಳನ್ನು ಬಳಸಿದ್ದರೆ ಅದೇ ರೀತಿ ಆಯುರ್ವೇದ ಕಾಲೇಜು, ಕಾಡಾ ಕಟ್ಟಡ, ಸರ್ಕಾರಿ ಅತಿಥಿಗೃಹ ಹಾಗೂ ವೆಲ್ಲಿಂಗ್ಟನ್ ಕಟ್ಟಡ ದುರಸ್ತಿಗೆ ಸುಣ್ಣದ ಗಾರೆ, ನದಿ ಮರಳು ಹಾಗೂ ಇತರೆ ನೈಸರ್ಗಿಕ ಪದಾರ್ಥ ಬಳಸಿದ್ದಾರೆ. ಇತ್ತೀಚೆಗೆ ಇಷ್ಟು ಕಟ್ಟಡಗಳ ಸಂರಕ್ಷಣೆ ಆಗಿದೆ. ಆದರ ದೊಡ್ಡ ಗಡಿಯಾರ ಸಂರಕ್ಷಣೆಗೆ ನದಿ ಮರಳು ಬಳಸದೆ, ಎಂ. ಸ್ಯಾಂಡ್ ಮತ್ತು ಸಿಮೆಂಟ್ಬಳಸುತ್ತಿದ್ದಾರೆ. ಆದ್ದರಿಂದ ಅದನ್ನು ನಿಲ್ಲಿಸಬೇಕು. ಐತಿಹಾಸಿಕ ದೊಡ್ಡ ಗಡಿಯಾರ ದುರಸ್ತಿಗೆ ಮತ್ತು ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಆರ್ಯನ್, ಉಪಾಧ್ಯಕ್ಷ ಮನೋಹರ್ ಗೌಡ, ರಾಜ್ಯ ಸಂಚಾಲಕ ರತನ್ಚಿಕ್ಕು, ಜಿಲ್ಲಾ ಉಪಾಧ್ಯಕ್ಷ ಗೌತಮ್, ಪದಾಧಿಕಾರಿಗಳಾದ ಶೈಲಜೇಶ್, ರವಿಕೀರ್ತಿ, ಸಿಂಧು, ಎಚ್.ಆರ್. ಶ್ರೀನಿವಾಸ್, ಮಹದೇವ್ಶೆಟ್ರು, ಆರ್. ಯಶೋಧಾ ಮೊದಲಾದವರು ಇದ್ದರು.