ಸಾರಾಂಶ
ಮುಂಡರಗಿ: ಪ್ರತಿಟನ್ ಕಬ್ಬಿಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿ ₹500 ಸೇರಿ ₹3129 ನೀಡಬೇಕು ಮತ್ತು ಕಬ್ಬುಕಟಾವು ಮಾಡುವವರು ರೈತರಿಂದ ಹೆಚ್ಚುವರಿ ಖುಷಿ ಹಣ ಪಡೆಯುವುದು ತಪ್ಪಿಸಬೇಕು ಎಂದು ಒತ್ತಾಯಿಸಿ ಸೋಮವಾರ ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಮುಂದೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರಕ್ಕೆ ಸಂಬಂಧಿಸಿದಂತೆ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ಪ್ರತಿಟನ್ ಕಬ್ಬಿಗೆ ₹2629 ನೀಡಬೇಕು. ಇಷ್ಟಾದರೂ ರೈತರಿಗೆ ಯಾವುದೇ ರೀತಿ ಅನುಕೂಲವಾಗುವುದಿಲ್ಲ ಎಂದರು.ಕಬ್ಬು ಕಟಾವಿನ ಸಂದರ್ಭದಲ್ಲಿ ರೈತರು ಕಟಾವು ಮಾಡುವ ಗ್ಯಾಂಗ್‌ನವರಿಗೆ ಪ್ರತಿ ಟನ್ ಕಬ್ಬು ಕಟಾವಿಗೆ ಖುಷಿ ಎಂದು ₹150ರಿಂದ ₹500ರ ವರೆಗೆ ನೀಡಬೇಕು. ನೀಡದೇ ಇದ್ದಲ್ಲಿ ಆ ರೈತರ ಜಮೀನಿನ ಕಬ್ಬನ್ನು ನಿಗದಿತ ಸಮಯಕ್ಕೆ ಕಠಾವು ಮಾಡುವುದಕ್ಕೆ ಬರುವುದಿಲ್ಲ. ಆದ್ದರಿಂದ ಈ ಹಾನಿಯನ್ನು ತುಂಬಿಕೊಳ್ಳಲು ರೈತರಿಗೆ ಪ್ರತಿ ಟನ್‌ಗೆ ₹500 ಸೇರಿ ₹3129 ನೀಡಬೇಕೆಂದು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್., ಕಾರ್ಖಾನೆ ಜಿಎಂ ಧರ್ಮೆಂದ್ರ ಮತ್ತಿತರರು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ, ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ ರೈತರಿಗೆ ಹಣ ನೀಡಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತರು, ಎಫ್‌ಆರ್‌ಸಿ ಪ್ರಕಾರ ಪ್ರತಿಟನ್ ಕಬ್ಬಿಗೆ ₹2629 ನೀಡಬೇಕಿದೆ. ಬೇಕಾದರೆ ಅದರಲ್ಲಿ, ನಮಗೆ ₹29 ಕಡಿಮೆ ಮಾಡಿ ಕಬ್ಬು ಕಟಾವು ಮಾಡುವವರಿಗೆ ಖುಷಿಗೆ ಹಣ ಕೊಡುವುದನ್ನು ತಪ್ಪಿಸಬೇಕು ಎಂದು ಎಂದು ರೈತರು ಪಟ್ಟು ಹಿಡಿದರು.ಎಫ್ಆರ್‌ಪಿ ದರಕ್ಕಿಂತ ಹೆಚ್ಚುವರಿ ಹಣ ನೀಡಲಾಗುವುದಿಲ್ಲ. ರೈತರು ಸಹಕರಿಸಬೇಕೆಂದು ತಿಳಿಸಿ, ರೈತರಿಂದ ಕಟಾವು ಮಾಡುವವರು ಹೆಚ್ಚುವರಿ ಹಣ ತೆಗೆದುಕೊಳ್ಳುವುದನ್ನು ತಪ್ಪಿಸುವ ಕುರಿತು ಯಾವುದೇ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿಕುಮಾರ ಕೊಳಲು, ಹುಸೇನಸಾನ್ ಕುರಿ, ಸಂತೋಷ ಹಲವಾಗಲಿ, ಪ್ರಕಾಶ ಸಜ್ಜನರ, ಹನುಮಂತ ಚೂರಿ, ಈರಣ್ಣ ಕವಲೂರ, ರಂಜಿತ್ ಮದ್ಯಪಾಟಿ, ಮಾಬುಸಾಬ ಬಳ್ಳಾರಿ, ರವಿ ನಾಯಕ, ನಿಂಗಪ್ಪ ಬಂಗಿ, ಮಂಜುನಾಥ ತಂಟ್ರಿ, ಈರಣ್ಣ ಮಲ್ಲಾಡ, ಈರಣ್ಣ ಕಾತರಕಿ, ಪ್ರವೀಣ ಹಂಚಿನಾಳ, ರಾಜಾಭಕ್ಷಿ ಬುಡ್ನಾಯ್ಕರ್, ಮಹಾದೇವಪ್ಪ ಹುಳಕಣ್ಣವರ, ಮಹೇಂದ್ರಗೌಡ ಪಾಟೀಲ, ಕೊಟೇಪ್ಪ ಚೌಡ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.