ಜಿಲ್ಲಾ ರೈತ ಮುಖಂಡ ಅಶ್ವಥ್ ಮಾತನಾಡಿ ಜಿಲ್ಲೆಯಲ್ಲಿನ ಕಂದಾಯ ಇಲಾಖೆಗಳಲ್ಲಿ ವಿವಿಧ ಹಂತಗಳಲ್ಲಿರುವ ರೈತ ಸಂಬಂಧಿ ಸಿವಿಲ್ ದಾವೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ ಸಂಬಂಧಪಟ್ಟ ರೈತರ ಭೂ ಹಕ್ಕು ಪಡೆಯಲು ಅನುಕೂಲ ಮಾಡಿಕೊಡಬೇಕು. ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆ ಶೀಘ್ರ ಪ್ರಾರಂಭಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ರೈತರ ವಿವಿಧ ಬೇಡಿಕೆಗಳನ್ನು ಚರ್ಚಿಸಲು ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿ ಸಭೆ ಕರೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಾರ್ಯಕರ್ತರು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರೈತಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿಪತ್ರ ನೀಡಿದರು.

ಈ ವೇಳೆ ಮಾತನಾಡಿದ ಎ.ಎಲ್. ಬೈರೇಗೌಡ, ಜಿಲ್ಲೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಅನುಕೂಲವಾಗುವಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಹೊಸ ಕೇಂದ್ರಗಳನ್ನು ತೆರೆಯಬೇಕು. ಕೃಷಿ ಸಮ್ಮಾನ್ ಯೋಜನೆ ನಿಯಮ ಸಡಿಲಿಕೆ ಮಾಡಬೇಕು. ಇದರಿಂದ ಹಲವಾರು ರೈತರಿಗೆ ಸರ್ಕಾರದ ಸೌಲಭ್ಯ ಸಿಗುತ್ತದೆ ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಒಂದು ಕಡೆ ಚಿರತೆ ದಾಳಿಗೆ ರೈತರು ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಆನೆ ದಾಳಿ ನಿರಂತರವಾಗಿ ನಡೆಯುತ್ತಿದೆ. ವನ್ಯಜೀವಿಗಳ ನಿಯಂತ್ರಣ ಆಗುತ್ತಿಲ್ಲ. ರೈತರು ಕೃಷಿ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಜಮೀನುಗಳ ಬಳಿ ಹೋಗಲು ಹೆದರುವಂತಾಗಿದೆ.

ತಾಲೂಕು ಕಚೇರಿಗಳಲ್ಲಿ ಕಂದಾಯ ಇಲಾಖೆಯ ರೈತರ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಜಿಲ್ಲಾಧಿಕಾರಿ ಕೂಡಲೇ ರೈತರ ಸಭೆ ಕರೆದು ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದರು.

ಬರ ಪರಿಹಾರ ಮೊತ್ತ ಹೆಚ್ಚಿಸಬೇಕು. ಸರ್ಕಾರದಿಂದ ನೀಡುವ ಸಹಾಯಧನ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಮೂಲಸೌಕರ್ಯ ಕೊರತೆಗಳಿವೆ. ನೂತನ ಮಾರುಕಟ್ಟೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೈರೇಗೌಡ ಒತ್ತಾಯಿಸಿದರು.ಕಿರುಕುಳ ತಪ್ಪಿಸಿ :

ರೈತಸಂಘದ ಜಿಲ್ಲಾ ಗೌರವಾಧ್ಯಕ್ಷ ಡಿ.ಎಂ. ಮಾದೇಗೌಡ ಮಾತನಾಡಿ, ರೈತರು ಕಾಲಾಂತರದಿಂದ ಅನುಭವವಿರುವ ಸರ್ಕಾರಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಹೋದರೆ ಅರಣ್ಯ ಇಲಾಖೆ ದೌರ್ಜನ್ಯ ಮಾಡುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸರ್ಕಾರ ತಡೆಯೊಡ್ಡಬೆಕು. ಸರ್ವೆ ಇಲಾಖೆಯಿಂದ ಆಗುತ್ತಿರುವ ವಿಳಂಬ, ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಡೆಯಬೇಕು ಎಂದು ಆಗ್ರಹಿಸಿದರು.ಜಿಲ್ಲೆಯಲ್ಲಿ ಬಾಕಿ ಇರುವ ರೈತರ ರಾಗಿ ಹಣವನ್ನು ಬಿಡುಗಡೆ ಮಾಡಬೇಕು. ಮಾವು ಸಂಸ್ಕರಣಾ ಘಟಕ ಪ್ರಾರಂಭಿಸಬೇಕು. ಎಸ್‌ಐಆರ್ ಮೂಲಕ ರಾಜ್ಯದಲ್ಲಿ ಮತದಾರರನ್ನು ಗೊಂದಲಕ್ಕೀಡು ಮಾಡುತ್ತಿದ್ದು ಚುನಾವಣಾ ಆಯೋಗ ಈ ಸಂಬಂಧ ಕ್ರಮ ವಹಿಸಿ ಜಿಲ್ಲೆಯ ಯಾವುದೇ ನೈಜ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಸೂಚಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ರೈತ ಮುಖಂಡ ಅಶ್ವಥ್ ಮಾತನಾಡಿ ಜಿಲ್ಲೆಯಲ್ಲಿನ ಕಂದಾಯ ಇಲಾಖೆಗಳಲ್ಲಿ ವಿವಿಧ ಹಂತಗಳಲ್ಲಿರುವ ರೈತ ಸಂಬಂಧಿ ಸಿವಿಲ್ ದಾವೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ ಸಂಬಂಧಪಟ್ಟ ರೈತರ ಭೂ ಹಕ್ಕು ಪಡೆಯಲು ಅನುಕೂಲ ಮಾಡಿಕೊಡಬೇಕು. ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆ ಶೀಘ್ರ ಪ್ರಾರಂಭಿಸಬೇಕು ಎಂದರು.ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಗೋವಿಂದರಾಜು, ಜಯಮ್ಮ, ನಂಜಪ್ಪ, ಸಣ್ಣಮ್ಮ, ನವೀನ್‌ಕುಮಾರ್, ರಮೇಶ್, ರಾಜೇಶ್, ಜಯಲಕ್ಷ್ಮಮ್ಮ, ರವೀಶ, ಗೋವಿಂದಯ್ಯ, ಮರಿಲಿಂಗಯ್ಯ, ಚಿಕ್ಕಸಿದ್ದಯ್ಯ, ನಿಂಗಪ್ಪ, ರೇವಣ್ಣ, ಸಿದ್ದರಾಜು, ಶೈಲಜ, ರಾಮಚಂದ್ರಯ್ಯ, ನಂಜೇಗೌಡ, ಕೆಂಪರಾಜು, ಲೋಕೇಶ್, ನರಸಲಿಂಗಯ್ಯ, ಜೈಶಂಕರ್ ಮತ್ತಿತರರು ಭಾಗವಹಿಸಿದ್ದರು.