ಸಾರಾಂಶ
ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಪಂಗೆ ತೆರಿಗೆ ವಂಚಿಸಿರುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮುಖಂಡರು ಸೋಮವಾರ ತಾಲೂಕಿನ ತೋರಣಗಲ್ಲು ಗ್ರಾಪಂ ಮುಂಭಾಗ ಪ್ರತಿಭಟನೆ ಮಾಡಿದರು.ಮುಖಂಡರು ತಮ್ಮ ಮನವಿಯನ್ನು ಗ್ರಾಪಂ ಅಧ್ಯಕ್ಷ ಎ.ವೀರೇಶ್, ಪಿಡಿಒ ಸಿದ್ದಲಿಂಗಸ್ವಾಮಿಗೆ ಸಲ್ಲಿಸಿದರು.ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘಟನೆಯ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ತೋರಣಗಲ್ಲು ಗ್ರಾಮ ವ್ಯಾಪ್ತಿಯಲ್ಲಿ ಬರುವ ಜೆಎಸ್‌ಡಬ್ಲು ಕಂಪನಿಗೆ ಒಳಪಟ್ಟಿರುವ 12 ಬೃಹತ್ ಕೈಗಾರಿಕೆಗಳಿಂದ ಗ್ರಾಪಂಗೆ ಕೋಟ್ಯಂತರ ರುಪಾಯಿ ತೆರಿಗೆಯನ್ನು ವಂಚಿಸಲಾಗಿದೆ. ಈ ಕಂಪನಿಗಳಿಂದ ಪ್ರಸಕ್ತ ವರ್ಷದಲ್ಲಿ ಚಾಲ್ತಿ ತೆರಿಗೆ ಒಳಗೊಂಡಂತೆ ₹೧೭.೩೭ ಕೋಟಿ ತೆರಿಗೆ ಬಾಕಿ ಇದ್ದು, ಇದನ್ನು ಕಂಪನಿಗಳು ಗ್ರಾಪಂಗೆ ಸಂದಾಯ ಮಾಡಿಲ್ಲ. ತೆರಿಗೆಯನ್ನು ವಸೂಲಿ ಮಾಡುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ದೂರಿದರು.ಮಾ.೧೨ರಂದು ನಡೆಯಲಿರುವ ಜೆಎಸ್‌ಡಬ್ಲು ಸಿಮೆಂಟ್ ಕೈಗಾರಿಕೆ ಉತ್ಪಾದನೆ ಹೆಚ್ಚಿಸುವ ಪರಿಸರ ಮಾಲಿನ್ಯ ಸಾರ್ವಜನಿಕ ಸಭೆಯಲ್ಲಿ ಪರವಾನಗಿ ನೀಡದಂತೆ ಗ್ರಾಪಂ ನಿರ್ಣಯ ತೆಗೆದುಕೊಳ್ಳಬೇಕು. ಪರಿಸರ ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳನ್ನು ಕೂಡಲೆ ಮುಚ್ಚಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಉದ್ಯೋಗ ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ ಕಾನೂನು ಕ್ರಮ ಕೈಗೊಳ್ಳಬೇಕು. ಜನತೆಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಮುಖಂಡರಾದ ಶಿವರೆಡ್ಡಿ, ನಾಗಭೂಷಣ, ತಿಮ್ಮಪ್ಪ, ಕೆ.ಹನುಮಕ್ಕ, ಕೆ.ಹಂಪಮ್ಮ, ಹೊನ್ನೂರಮ್ಮ, ಅಂಜಿನಮ್ಮ, ಲಕ್ಷ್ಮಿ, ಪಾರ್ವತಿ, ರಾಜ, ಅಭಿಷೇಕ್, ರಂಜಿತ್, ಈರಮ್ಮ ಉಪಸ್ಥಿತರಿದ್ದರು.