ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಸಂವಿಧಾನದ ಅನುಚ್ಛೇದ 371 ಜೆ ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಪಕ್ಷಾತೀತವಾಗಿ ಶನಿವಾರ ಬೃಹತ್ ಹೋರಾಟ ನಡೆಸಲಾಯಿತು.ಸ್ಥಳೀಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅನುಚ್ಛೇದ 371 (ಜೆ) ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮುಖಾಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪ್ರೊ. ಡಿ.ಎಂ.ನಂಜುಂಡಪ್ಪ ವರದಿ ಹಾಗೂ ಇತರೆ ವರದಿಗಳ ಆಧಾರದ ಮೇಲೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಈ ಭಾಗದ ಅನೇಕ ಹೋರಾಟಗಾರರ ಹೋರಾಟದ ಫಲವಾಗಿ 98ನೇ ಸಂವಿಧಾನದ ತಿದ್ದುಪಡಿ ಪ್ರಕಾರ 371 ಜೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಉದ್ಯೋಗ ಅವಕಾಶ ನೀಡಲು 2013ರಲ್ಲಿ ಯುಪಿಎ ಸರ್ಕಾರ ಜಾರಿ ಮಾಡಿದೆ. ಆದರೆ ಹಸಿರು ಪ್ರತಿಷ್ಠಾನ ಇದನ್ನು ವಿರೋಧಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ವಂಚನೆ ಮಾಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕಲ್ಯಾಣ ಕರ್ನಾಟಕ ಭಾಗದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಬೆಂಗಳೂರಿನಲ್ಲಿ ಶೇ.8 ಮೀಸಲಾತಿ ಇದೆ. ಇದನ್ನು ಸಹಿಸದೆ ಪದೇ ಪದೇ ಮೈಸೂರು, ಬೆಂಗಳೂರು, ಧಾರವಾಡದಲ್ಲಿ ಪ್ರತ್ಯೇಕ ದಾವೆ ಹೂಡಲಾಗುತ್ತಿದೆ. ಇದು ಇಂದು ನಿನ್ನೆಯದ್ದಲ್ಲ. 2014ರಲ್ಲಿ ಕೆಎಲ್‌ಇ, ಮಣಿಪಾಲ ಶಿಕ್ಷಣ ಸಂಸ್ಥೆ ಮೀಸಲಾತಿ ವಿರೋಧಿಸಿದೆ. ಈಗ ಇದರ ವಿರುದ್ಧ ಒಗ್ಗಟ್ಟಿನ ಹೋರಾಟ ಅನಿವಾರ್ಯ. 371 ಜೆ ಸಮರ್ಪಕ ಅನುಷ್ಠಾನ ಮಾಡಬೇಕು. ಇದಕ್ಕಾಗಿಯೇ ಪ್ರತ್ಯೇಕ ಆಡಳಿತಾತ್ಮಕ ನ್ಯಾಯ ಮಂಡಳಿ ರಚಿಸಿ ಕಲಬುರಗಿಯಲ್ಲಿ ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಮಟ್ಟದ ಯಾವುದೇ ಹುದ್ದೆಗಳಿಗೆ ನೇಮಕ ಮಾಡುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಮೀಸಲಾತಿಯಂತೆ 371 ಜೆ ಮೀಸಲಾತಿ ನೀಡಬೇಕಿದೆ. ಆದರೆ ಕಳೆದ 10 ವರ್ಷದಿಂದ ಈ ಭಾಗಕ್ಕೆ ವಂಚನೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕೇತರ ರಾಜಕೀಯ ಮುಖಂಡರು ನಮ್ಮ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದರು.ಹೋರಾಟ ಉದ್ದೇಶಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಜಿ.ವಿರುಪಾಕ್ಷಪ್ಪ, ಮುಖಂಡರಾದ ಡಾ.ರಝಾಕ ಉಸ್ತಾದ್, ಎಂ.ವಿರುಪಾಕ್ಷಿ ಸೇರಿ ಹಲವಾರು ನಾಯಕರು ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎ.ಪಾಪಾರೆಡ್ಡಿ,ಎನ್.ಶಂಕ್ರಪ್ಪ, ಜಯಣ್ಣ, ಶ್ರೀದೇವಿ ನಾಯಕ, ರವೀಂದ್ರ ಜಲ್ದಾರ್, ರುದ್ರಪ್ಪ ಅಂಗಡಿ,ಅಮರೇಶ ಆರ್.ಕೆ, ಕೆ.ಶಾಂತಪ್ಪ, ಡಾ.ಬಸವರಾಜ ಕಳಸ, ಅಂಬಾಪತಿ ಪಾಟೀಲ್, ಅಶೋಕ ಕುಮಾರ ಸಿ.ಕೆ.ಜೈನ್,ಪ್ರಭಾಕಾರ ಪಾಟೀಲ್, ಕೆ.ಜಿ.ವೀರೇಶ್, ಬೂದಯ್ಯ ಸ್ವಾಮಿ, ಎಂ.ಪವನಕುಮಾರ, ಅಮರೇಗೌಡ ಹಂಚಿನಾಳ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು, ವಿವಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಸದಸ್ಯರು, ಶಾಲಾ-ಕಾಲೇಜುಗಳ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಅಂಬೇಡ್ಕರ್ ವೃತ್ತದಲ್ಲಿ ಸಮಚಾರ ಸಮಸ್ಯೆರಾಯಚೂರು ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಹಿನ್ನೆಲೆ ವಾಹನಗಳ ದಟ್ಟಣೆಯಿಂದಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟದ ಸ್ಥಳಕ್ಕೆ ರ್ಯಾಲಿ ಮುಖಾಂತರ ಆಗಮಿಸಿದ್ದರಿಂದಾಗಿ ಮುಖ್ಯ ರಸ್ತೆ, ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಿದವು. ವಾಹನ ದಟ್ಟಣೆ, ಸುಗಮ ಸಂಚಾರ ಹಾಗೂ ಹೋರಾಟದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು.