ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಗೃಹ ಸಚಿವ ಅಮಿಶ್ ಶಾ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ, ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದವರು ಶನಿವಾರ ಪ್ರತಿಭಟಿಸಿದರು.ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಜಮಾಯಿಸಿದ್ದ ಅವರು, ನಂತರ ಪುರಭವನ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟಿಸಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಅಮಿತ್ ಶಾ ರಾಜ್ಯಸಭೆ ಕಲಾಪದಲ್ಲಿ ಅಂಬೇಡ್ಕರ್ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಫ್ಯಾಷನ್ ಆಗಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ದೇವರ ಹೆಸರನ್ನು ಜಪಿಸಿದರೆ ಇಷ್ಟೊತ್ತಿಗೆ 7 ಜನ್ಮದ ಪುಣ್ಯವಾದರೂ ಸಿಗುತ್ತಿತ್ತು ಎಂದು ಹೇಳಿರುವುದು ಸಂವಿಧಾನ ವಿರೋಧಿ ನಡೆ ಮತ್ತು ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ. ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿ, ದೇಶದಲ್ಲಿರುವ ಕೋಟ್ಯಂತರ ದಲಿತರು, ಅಂಬೇಡ್ಕರ್ ಅನಾಯಾಯಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿರುವುದು ಖಂಡನಿಯ. ಅಂಬೇಡ್ಕರ್ ಎಂಬುದು ಹೆಸರಲ್ಲ ನಮ್ಮೆಲ್ಲರ ಉಸಿರು. ಸಂವಿಧಾನ ಈ ದೇಶದ ಶಕ್ತಿ. ಅಂಬೇಡ್ಕರ್ ಇಲ್ಲದ ಭಾರತವನ್ನು ನೆನೆಯುವುದು ಕಷ್ಟ. ಅಂತಹದರಲ್ಲಿ ಅಂಬೇಡ್ಕರ್ ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದು ಅಮಿತ್ ಶಾ ವ್ಯಕ್ತಿತ್ವ ತೋರಿಸುತ್ತದೆ ಎಂದು ಅವರು ಖಂಡಿಸಿದರು.ಸಂವಿಧಾನಕ್ಕೆ ನಮಸ್ಕಾರ ಮಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವುದು ಬಿಜೆಪಿ ಮನಸ್ಥಿತಿ. ಈ ದೇಶದ 140 ಕೋಟಿ ಜನರ ಕಷ್ಟ ಸುಖಗಳನ್ನು ಚರ್ಚೆ ಮಾಡುವ ಸಂಸತ್ತಿನಲ್ಲಿ ಕೂರಲು ಇವರಿಗೆ ನೈತಿಕತೆ ಇಲ್ಲ. ಈ ಕೂಡಲೇ ಅಮಿತ್ ಶಾ ಸಂಸತ್ ಸದಸ್ಯತ್ವ ರದ್ದಾಗಬೇಕು. ಭಾರತದ ಪ್ರತಿಯೊಬ್ಬ ಪ್ರಜೆಗೂ ಕ್ಷಮೆಯಾಚಿಸಬೇಕು. ಅಲ್ಲದೆ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಅದರಿಂದ ಕಿತ್ತೊಗೆದು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.ಮಹಾಸಂಘದ ರಾಜ್ಯ ಉಪಾಧ್ಯಕ್ಷ ಆರ್. ಶಿವಣ್ಣ, ಜಿಲ್ಲಾಧ್ಯಕ್ಷ ಆರ್ಟಿಸ್ಟ್ ಎಸ್. ನಾಗರಾಜು, ಪದಾಧಿಕಾರಿಗಳಾದ ಆರ್. ದಾಸ್, ಯತಿರಾಜ್, ಕೆ. ನಾಗರತ್ನಾ ಮಂಜುನಾಥ್, ಆರ್ಮುಗಂ, ಮುಖಂಡರಾದ ಶಂಕರ್ ಬಾಬು, ಪಿ. ಮಂಜುನಾಥ್, ಮಹದೇವ, ಸಿ.ಪಿ. ರಾಜೀವ್, ಎಂ. ಮಣಿ, ಎನ್.ಪಿ. ಗುರುದತ್ ಮೂರ್ತಿ, ಬಿ.ಜಿ. ರಾಮಚಂದ್ರು, ಶಶಿಕುಮಾರ್ ಮೊದಲಾದವರು ಇದ್ದರು.