23ರಂದು ಅಮಿತ್ ಶಾ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Jan 18 2025, 12:46 AM IST

ಸಾರಾಂಶ

ರಾಮನಗರ: ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜನವರಿ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಜಿಲ್ಲಾ ಸಂಯೋಜಕ ವಿನಯ್ ತಿಳಿಸಿದರು.

ರಾಮನಗರ: ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜನವರಿ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಜಿಲ್ಲಾ ಸಂಯೋಜಕ ವಿನಯ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಅಮಿತ್ ಶಾ ಕ್ಷಮೆ ಕೇಳಬೇಕು. ಈ ಹೋರಾಟದ ಮೂಲಕ ಮನುವಾದಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮೂಲೋತ್ಪಾಟನೆಗೆ ಸನ್ನದ್ಧರಾಗೋಣ ಎಂಬ ಕರೆ ನೀಡಲಾಗುವುದು ಎಂದರು.

ಸಂಸತ್ತಿನಲ್ಲಿ ನಡೆದ ಅಧಿವೇಶನದಲ್ಲಿ ಭಾರತ ಸಂವಿಧಾನದ ಜನಕ, ಭಾರತ ರತ್ನ ಡಾ. ಬಿ.ಆ‌ರ್.ಅಂಬೇಡ್ಕರ್ ಅವರ ಕುರಿತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನವಾಗಿ ''''''''ಅಂಬೇಡ್ಕ‌ರ್, ಅಂಬೇಡ್ಕರ್ ಎಂದು ಹೇಳುವುದು ನಿಮಗೆ ಫ್ಯಾಶನ್ ಆಗಿಬಿಟ್ಟಿದೆ. ಆ ಹೆಸರು ಹೇಳುವುದನ್ನ ಬಿಟ್ಟು ದೇವರ ಹೆಸರು ಹೇಳಿದ್ದರೆ, ನೇರವಾಗಿ ಸ್ವರ್ಗಕ್ಕೆ ದಾರಿ ಪ್ರಾಪ್ತಿಯಾಗುತ್ತಿತ್ತು'''''''' ಎಂದು ಹೇಳಿಕೆ ನೀಡಿ ಡಾ. ಅಂಬೇಡ್ಕ‌ರ್ ಅವರನ್ನು ಮೊದಲ ಬಾರಿಗೆ ಸಂಸತ್ತಿನ ಅಧಿವೇಶನದಲ್ಲಿ ಅಪಮಾನಿಸುವ ಮೂಲಕ ಕೋಟ್ಯಾಂತರ ಅಂಬೇಡ್ಕ‌ರ್ ಅಭಿಮಾನಿ ಮತ್ತು ಅನುಯಾಯಿಗಳ ಮನಸ್ಸಿಗೆ ಆಘಾತವನ್ನು ಉಂಟು ಮಾಡಿದ್ದಾರೆ ಎಂದು ಹೇಳಿದರು.

ಈ ರೀತಿ ಅಂಬೇಡ್ಕರ್ ಅವರನ್ನು ಅಪಮಾನಿಸುವುದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಒಂದು ವ್ಯವಸ್ಥಿತ ಸಂಚಿನ ರೀತಿಯಂತೆ ಕಂಡುಬಂದಿದೆ. ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನ ಬದಲಾವಣೆ ಮಾಡುತ್ತೇವೆ. ಸಂವಿಧಾನವನ್ನು ತೆಗೆದುಬಿಡುತ್ತೇವೆ. ಈ ದೇಶದ ಸಂವಿಧಾನ ಸರಿಯಿಲ್ಲ ಸೇರಿದಂತೆ ಹಲವಾರು ಕುಚೋದ್ಯದ ಮಾತುಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಖಂಡರು ಹೇಳಿದ್ದಾರೆ ಎಂದು ಕಿಡಿಕಾರಿದರು.

ಡಾ.ಬಿ.ಆರ್.ಅಂಬೇಡ್ಕ‌ರ್ ಹೀಯಾಳಿಸಿ ಅಪಮಾನಿಸಿರುವ ಅಮಿತ್ ಶಾ ಸ್ವಲ್ಪವೂ ಹಿಂಜರಿಕೆ ಇಲ್ಲದೆ ತನ್ನ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ದೇಶದ್ರೋಹಿ ಮಾತುಗಳನ್ನು ಖಂಡಿಸಬೇಕಾಗಿದ್ದ ಪ್ರಧಾನಿ ಮೋದಿಯವರ ಬೆನ್ನಿಗೆ ನಿಂತಿದ್ದಾರೆ. ಇಂತಹವರಿಂದ ನ್ಯಾಯ ಬಯಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್ ಮಾತನಾಡಿ, ದಲಿತರ ಪರಿಸ್ಥಿತಿಯನ್ನು ನರಕ ಸದೃಶವಾಗಿಸಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ತನ್ನ ಜಾತಿವಾದಿ - ಕೋಮುವಾದಿ ದುರಾಡಳಿತದ ವಿರುದ್ಧ ಗಟ್ಟಿಯಾಗಿ ದನಿ ಎತ್ತುತ್ತಿರುವ ಮಲ್ಲಿಕಾರ್ಜುನ ಖರ್ಗೆಯನ್ನು ಎದುರಿಸಲಾಗದೆ ಹೇಡಿಗಳಂತೆ ಅವರ ಮಗ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಆರೋಪ ಹೊರಿಸಿ ಸ್ವಾಭಿಮಾನಿ ದಲಿತ ಯುವ ನಾಯಕರ ಬಾಯಿ ಮುಚ್ಚಿಸಲು ಮುಂದಾಗಿದೆ ಎಂದು ಟೀಕಿಸಿದರು.

ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಮೂಲಕ ದಲಿತ ಸಮುದಾಯಕ್ಕೆ ನೋವು ನೀಡಿ, ಸ್ವಾಭಿಮಾನವನ್ನು ಕೆಣಕಿದ್ದಾರೆ. ಅವರು ಪ್ರತಿನಿಧಿಸುತ್ತಿರುವ ರಾಜಕೀಯ ಪಕ್ಷ, ಬಲಪಂಥೀಯ ಸಿದ್ಧಾಂತ, ಜಾತಿವಾದಿ - ಕೋಮುವಾದಿ ವಿಭಜನೆ ರಾಜಕೀಯವನ್ನು ಮುಂದೆ ಈ ನೆಲದಲ್ಲಿ ನಡೆಯುವುದಿಲ್ಲ. ಆರ್‌ಎಸ್‌ಎಸ್‌ - ಬಿಜೆಪಿ ಸಿದ್ಧಾಂತವನ್ನು ಬುಡ ಸಮೇತ ಕಿತ್ತು ಬಿಸಾಕಲು ಕರೆ ಕೊಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹನುಮಂತಯ್ಯ, ರಮೇಶ್ , ವಿಜಯ್ , ಸೋಮಶೇಖರ್ , ಗಂಗಾಧರ್ , ಮಹದೇವಯ್ಯ, ಸಂತೋಷ್ ಇತರರಿದ್ದರು.

17ಕೆಆರ್ ಎಂಎನ್ 2.ಜೆಪಿಜಿ

ರಾಮನಗರದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಜಿಲ್ಲಾ ಸಂಯೋಜಕ ವಿನಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.