ಸಾರಾಂಶ
ಹಾನಗಲ್ಲ: ಹಾನಗಲ್ಲ ಪುರಸಭೆಯ ೧೪ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಕಾನೂನು ಬಾಹೀರವಾಗಿದ್ದು ತಕ್ಷಣ ಇದನ್ನು ರದ್ದುಪಡಿಸುವಂತೆ ಸಾರ್ವಜನಿಕರು ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿ ಪ್ರತಿಭಟನೆ ನಡೆಸಿದರು.ಮಂಗಳವಾರ ಇಲ್ಲಿನ ಪುರಸಭೆ ಪ್ರಾಂಗಣದಲ್ಲಿ ಧರಣಿ ನಡೆಸಿದ ಸಾರ್ವಜನಿಕರು ಹಾನಗಲ್ಲ ಪುರಸಭೆ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಸರಿಯಾದ ಪ್ರಚಾರವಿಲ್ಲದೆ ಹರಾಜಿಗೆ ಮುಂದಾಗಿರುವುದು ಸರಿ ಅಲ್ಲ. ಪುರಸಭೆ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳುವ ಅಧಿಕಾರಿಗಳು ಉತ್ತಮ ಬಾಡಿಗೆ ಬರಬಹುದಾದ ವಾಣಿಜ್ಯ ಮಳಿಗೆಗಳ ಹರಾಜನ್ನು ಸರಿಯಾದ ಪ್ರಚಾರವಿಲ್ಲದೆ ಹರಾಜು ಪ್ರಕ್ರಿಯೆ ನಡೆಸುತ್ತಿರುವುದು ಪುರಸಭೆಗೆ ಆದಾಯ ಲೋಪ ಹಾಗೂ ವ್ಯಾಪಾರ ಮಾಡುವವರಿಗೆ ಕೂಡ ವಾಣಿಜ್ಯ ಮಳಿಗೆ ಸಿಗಲಾರದ ಸ್ಥಿತಿ ತಂದಿಟ್ಟಿದೆ ಎಂದು ಆಪಾದಿಸಿದ್ದಾರೆ.ಅಲ್ಲದೆ ಇ-ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮೇಲ್ನೋಟಕ್ಕೆ ಕಂಡು ಬಂದಿದೆ. ಯಾವುದೇ ಪ್ರಚಾರವಿಲ್ಲದೆ ಮಳಿಗೆ ಹರಾಜು ಮಾಡುವ ಉದ್ದೇಶದ ಹಿಂದೆ ಯಾರದೋ ಹಿತಾಸಕ್ತಿ ಕಾಯುವ ತಂತ್ರಗಾರಿಕೆ ಇದೆ. ಮಳಿಗೆ ಹರಾಜಿನ ವಿಷಯವನ್ನು ಡಂಗುರ ಸಾರಿಸಿ, ಕರ ಪತ್ರ ಪ್ರಕಟಿಸಿ, ಪುರಸಭೆಯಲ್ಲಿಯೂ ಸೂಚನಾ ಫಲಕಕ್ಕೆ ನೊಟೀಸು ಪ್ರಕಟಿಸುವ ಅಗತ್ಯವಿದೆ. ಆದರೆ ಇದಾವುದನ್ನೂ ಮಾಡದೇ ಏಕಾ ಏಕಿ ಇ-ಹರಾಜು ಎಂದು ಪ್ರಕಟಿಸಿ ಹರಾಜು ಮಾಡುವುದು ಸರಿ ಅಲ್ಲ. ಇಲ್ಲೆಲ್ಲೋ ಒಳ ಒಪ್ಪಂದದ ಗುಮಾನಿಯೂ ಕಾಣಿಸುತ್ತಿದೆ. ಸಾರ್ವಜನಿಕರಿಗೆ ಹರಾಜಿನ ಬಗೆಗೆ ಮಾಹಿತಿ ಇಲ್ಲದ ಕಾರಣ ಬಹಳಷ್ಟು ಅಪೇಕ್ಷಿತರು ಟೆಂಡರ್ ಹಾಕಲು ಸಾಧ್ಯವಾಗಿಲ್ಲ. ಇದೆಲ್ಲದರ ಹಿಂದೆ ಭ್ರಷ್ಟಾಚಾರ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ತಕ್ಷಣದಿಂದ ಈ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೊಸ ಟೆಂಡರನ್ನು ನಿಯಮನುಸಾರ ಹಾಗೂ ಡಂಗುರ ಸಾರಿಸುವುದು, ಕರ ಪತ್ರ ಹಂಚುವುದು, ಅಗತ್ಯವಿರುವಲ್ಲಿ ನೋಟಿಸ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಕಾರ್ಯ ನಡೆಯಬೇಕು. ಈ ಮೂಲಕ ವ್ಯಾಪಾರಸ್ಥರಿಗೆ ಸರಿಯಾದ ಅಂಗಡಿ ಪಡೆಯಲು ಅನುಕೂಲ ಆಗಬೇಕು. ಅಲ್ಲದೆ ಪುರಸಭೆಗೂ ಒಳ್ಳೆಯ ಬಾಡಿಗೆ ಮೂಲಕ ಆದಾಯವೂ ಸಾಧ್ಯ ಎಂದು ಮನವಿ ಮಾಡಿದ್ದಾರೆ. ಈ ಟೆಂಡರ್ ಮುಂದೂಡದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.ಅರ್ಜುನ ಹನುಮನಕೊಪ್ಪ, ಷಣ್ಮುಖ ಕುಂದೂರ, ಕರಿಬಸಪ್ಪ ಗುಂಡೂರ, ಶಶಿಕುಮಾರ ತುಮರಿಕೊಪ್ಪ, ಷಣ್ಮುಖ ಮೂಡ್ಲಿ, ಪರಶುರಾಮ ತಳಗೇರಿ, ಲೋಕೇಶ ಸೂಡಂಬಿ, ಮಂಜುನಾಥ ಬಂಗಾರಿ, ಬಿ.ಸಿ.ಕಲಾಲ, ಪ್ರವೀಣ ತುಮರಿಕೊಪ್ಪ, ವಿಶ್ವನಾಥ ಬಂಗಾರಿ, ಸಿದ್ದು ಆಲದಕಟ್ಟಿ, ಮೌನೇಶ ಬೇವಿನಮರದ ಮೊದಲಾದವರಿದ್ದರು.ಪ್ರತಿಕ್ರಿಯೆ:ಇ-ಹರಾಜು ಮೇಲಧಿಕಾರಿಗಳ ಮಟ್ಟದಲ್ಲಿಯೇ ಇದನ್ನು ತಡೆಯಬೇಕಾಗಿರುವುದರಿಂದ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತ್ತೆ ಸಾರ್ವಜನಿಕರ ಅಪೇಕ್ಷೆ ಹಾಗೂ ಕಾನೂನು ವ್ಯಾಪ್ತಿಯಲ್ಲಿ ಹರಾಜು ಕರೆಯಲಾಗುವುದು. ಹಾನಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ೧೧೭ ವಾಣಿಜ್ಯ ಮಳಿಗೆಗಳಿವೆ. ಇದರಲ್ಲಿ ಇ-ಟೆಂಡರ್ ಕರೆದಿರುವ ೧೪ ಮಳಿಗೆಗಳನ್ನು ಹೊರತುಪಡಿಸಿ ಇನ್ನೂ ೨೦ ಮಳಿಗೆಗಳು ಖಾಲಿ ಇವೆ. ಇವುಗಳ ಹರಾಜಿಗೂ ಕೂಡ ಸಭೆಯಲ್ಲಿ ಪುರಸಭೆಯ ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಹರಾಜು ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.
೧೪ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಬಗೆಗೆ ಸಾರ್ವಜನಿಕರು ಕಛೇರಿಗೆ ಬಂದು ಈ ಹರಾಜನ್ನು ತಡೆಯಲು ಕೋರಿದ್ದಾರೆ. ಈ ಕುರಿತು ಪ್ರಯತ್ನ ನಡೆದಿದ್ದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕೂಡಲೇ ಹರಾಜು ರದ್ದುಗೊಳಿಸಿ ಮರು ಹರಾಜಿಗೆ ಮುಂದಾಗುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಪುರಸಭೆ ಅಧ್ಯಕ್ಷ ಮಮತಾ ಆರೆಗೊಪ್ಪ ಹೇಳಿದರು.