ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಗಂಭೀರ ಬಿಕ್ಕಟ್ಟಿನಲ್ಲಿದೆ. ಚುನಾವಣಾ ಪ್ರಕ್ರಿಯೆ ಅಪಹರಿಸಲಾಗಿದೆ.

ಹೊಸಪೇಟೆ: ಎಸ್‌ಐಆರ್‌ ಪ್ರಕ್ರಿಯೆ ರದ್ದುಗೊಳಿಸುವುದು ಮತ್ತು ಮುಖ್ಯಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಆರ್. ಭಾಸ್ಕರ್ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಜಿ. ಖಾಜಾ ಹುಸೇನ್ ನಿಯಾಜಿ, ದುರುಗಪ್ಪ ಪೂಜಾರಿ, ಪೀರ್ ಭಾಷಾ, ಕೆ. ಎಂ. ಸಂತೋಷ್ ಕುಮಾರ್‌, ಎನ್‌, ಯಲ್ಲಾಲಿಂಗ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಗಂಭೀರ ಬಿಕ್ಕಟ್ಟಿನಲ್ಲಿದೆ. ಚುನಾವಣಾ ಪ್ರಕ್ರಿಯೆ ಅಪಹರಿಸಲಾಗಿದೆ. ಚುನಾವಣಾ ಆಯೋಗ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮೀತ್ ಶಾ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಚುನಾವಣಾ ಆಯೋಗದ ದುರ್ಬಳಕೆಯಿಂದ 13 ಕೋಟಿ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ ಎಂದರು.

ಈ ಹಿನ್ನಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಸಂಪೂರ್ಣವಾಗಿ ರದ್ದುಗೊಳಿಸಬೇಕು. ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು. ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆ ನಡೆಸಿ ರದ್ದಾಗಿರುವ ಎಲ್ಲ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡ ಎಲ್.ಮಂಜುನಾಥ, ಬಿ. ತಾಯಪ್ಪ ನಾಯಕ, ವೈ. ರಾಮಚಂದ್ರ ಬಾಬು, ಬಿಸಾಟಿ ಮಹೇಶ್‌, ಕಲ್ಯಾಣಯ್ಯ, ಪಿ.ಬಾಬು, ಗಂಟೆ ಸೋಮಶೇಖರ್, ಸಣ್ಣಕ್ಕಿ ರುದ್ರಪ್ಪ, ನಜೀರ್ ಖಾನ್, ಸತ್ಯಮೂರ್ತಿ, ಸಿದ್ದಲಿಂಗಪ್ಪ, ಶಿವರೆಡ್ಡಿ, ಶಿವಕುಮಾರ್‌, ಈಡಿಗರ ಮಂಜುನಾಥ, ಕೆ.ನಾಗರತ್ನಮ್ಮ, ಕೆ.ಎಂ. ಸ್ವಪ್ನಾ, ಹನುಮಂತಪ್ಪ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಗರದ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.