ರಾಜ್ಯದಲ್ಲಿ ಅತಿವೃಷ್ಟಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ, ಇಂತಹ ಸಮಯದಲ್ಲಿ ಎಸ್‌ಡಿಆರ್‌ಎಫ್,ಎನ್‌ಡಿ.ಆರ್‌ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

೨೦೨೫-೨೬ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.ಈ ವೇಳೆ ಮಾತನಾಡಿದ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ ರಾಜ್ಯದಲ್ಲಿ ಅತಿವೃಷ್ಟಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ, ಇಂತಹ ಸಮಯದಲ್ಲಿ ಎಸ್‌ಡಿಆರ್‌ಎಫ್,ಎನ್‌ಡಿ.ಆರ್‌ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಕಬ್ಬು ದರ ಎಲ್ಲ ರೈತರಿಗೂ ಅನ್ವಯಿಸಲಿ

ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಾಂಗ್ರೆಸ್ ಸರ್ಕಾರ ನಿಗದಿ ಪಡಿಸಿರುವ ಪ್ರತಿ ಟನ್‌ಗೆ ೩೩೦೦ ರೂಗಳನ್ನು ಎಲ್ಲಾ ಜಿಲ್ಲೆಗಳ ರೈತರಿಗೂ ಅನ್ವಯಿಸುವಂತೆ ಕಡ್ಡಾಯವಾಗಿ ನೀಡಬೇಕು ಎಂದರು.ರಾಜ್ಯದ ಕಾವೇರಿ ಮತ್ತು ಕೃಷ್ಣಾ ಜಲಾಶಯ ಪ್ರದೇಶದ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ,ಮಹಾದಾಯಿ ಯೋಜನೆ,ಕಳಸಾ ಬಂಡೂರಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮುಖ್ಯ ಕಾಲುವೆ ಟನಲ್‌ಗಳು ಹಾಗೂ ಅಶ್ವೆಡೆಟ್‌ಗಳ ರಿಪೇರಿ, ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸಲು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿವರ್ಷ ೩೦ಸಾವಿರ ಕೋಟಿ ಹಣ ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.

ಕಿಸಾನ್ ಸಮ್ಮಾನ್ ಹಣ ನೀಡಲಿ

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರದ ವರ್ಷಕ್ಕೆ ೬ಸಾವಿರ ಜೊತೆ ನ ಬಿಜೆಪಿ ಸರ್ಕಾರ ಸಹ ೪ಸಾವಿರ ಸೇರಿಸಿ ರೈತರಿಗೆ ವರ್ಷಕ್ಕೆ ೧೦ಸಾವಿರ ನೀಡುತ್ತಿತ್ತು, ಅದನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದ್ದು ಮತ್ತೆ ಮುಂದುವರೆಸಬೇಕು. ಸಹಕಾರ ಬ್ಯಾಂಕುಗಳಲ್ಲಿ ರೈತರಿಗೆ ೧೦ಲಕ್ಷ ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಬೇಕು, ಹಾಲಿಗೆ ಪ್ರೋತ್ಸಾಹ ದನವಾಗಿ ಪ್ರತಿ ಲೀ.ಗೆ ೭ರೂ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು..ಈ ವೇಳೆ ಮಾಜಿ ಮಂಡಲ ಅಧ್ಯಕ್ಷರಾದ ನಾಗೇಶ್,ಹನುಮಪ್ಪ,ಗ್ರಾಪಂಃಸದಸ್ಯರಾದ ಹೆಚ್.ಆರ್.ಶ್ರೀನಿವಾಸ್,ಸುರೇಶ್,ಚೌಡಪ್ಪ,ನಗರ ಅಧ್ಯಕ್ಷ ಬಿ.ಪಿ.ಮಹೇಶ್,ಯುವ ಮೋರ್ಚಾ ಅಧ್ಯಕ್ಷ ಬಿಂಧು ಮಾಧವ,ಶಶಿಕುಮಾರ್,ಇತರರು ಇದ್ದರು.