ಮಳಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಪ್ರತಿಭಟನೆ

| Published : Feb 18 2025, 12:34 AM IST

ಸಾರಾಂಶ

ಚಿಕ್ಕಮಗಳೂರು, ಕಳೆದ ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಿ ರೈತರ ಭೂಮಿಗೆ ನೀರು ಹರಿಸದಿದ್ದರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆಯ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಚಳುವಳಿ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ನಿರ್ಧರಿಸಿದೆ.

ಶಾಸಕಿ ನಯನ ಮೋಟಮ್ಮ ಮನೆ ಮುಂದೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಚಳುವಳಿಗೆ ನಿರ್ಧಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಿ ರೈತರ ಭೂಮಿಗೆ ನೀರು ಹರಿಸದಿದ್ದರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆಯ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಚಳುವಳಿ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ನಿರ್ಧರಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಸೊಮವಾರ ಈ ವಿಷಯ ತಿಳಿಸಿದ ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಎಸ್ ಸುನೀಲ್ ಕುಮಾರ್ ಕಳೆದ ೨೫ ವರ್ಷಗಳಿಂದ ಮಳಲೂರು ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದ್ದು, ಈ ಬಾರಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಕಾಮಗಾರಿಯನ್ನು ಪ್ರಾರಂಭಿಸಿ ರೈತರ ಜಮೀನಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.ಸದಾ ಕಾಲ ಬರಗಾಲಕ್ಕೆ ತುತ್ತಾಗುವ ಮಲೆನಾಡಿಗೆ ಹೊಂದಿಕೊಂಡಿರುವ ಗ್ರಾಮಗಳಾದ ಮಳಲೂರು, ಕಲ್ಲಹಳ್ಳಿ, ಸಿರಗಾಪುರ, ಕಂಬೀಹಳ್ಳಿ, ಬಿಗ್ಗನಹಳ್ಳಿ, ತಗಡೂರು, ಕದ್ರಿಮಿದ್ರಿ, ಬಿಕ್ಕೇಮನೆ ಈ ಗ್ರಾಮಗಳ ಸುಮಾರು ೧೬೦೦ ಎಕರೆ ಪ್ರದೇಶದ ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ಹಿಂದೆ ಆರಂಭಗೊಂಡ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದೆ ಈ ಭಾಗದ ರೈತರು ತೊಂದರೆ ಅನುಭವಿಸುತ್ತಿದ್ದಾರೆಂದು ದೂರಿದರು.ಅಂಬಳೆ ಹೋಬಳಿ ಮತ್ತಿಕೆರೆ ಗ್ರಾಮದ ಬಳಿ ಯಗಚಿ ಉಪನದಿ ಬಿರಂಜಿ ಹಳ್ಳಿದಿಂದ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿಯುವ ನೀರನ್ನು ಏತ ನೀರಾವರಿ ಮೂಲಕ ಮಳಲೂರು ಹಾಗೂ ಕೆ.ಆರ್. ಪೇಟೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಜಮೀನಿಗೆ ನೀರೊದಗಿಸುವ ಯೋಜನೆ ೧೯೯೮ ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತು ೨೦೦೦ ನೇ ಇಸವಿಯಲ್ಲಿ ಶಂಕುಸ್ಥಾಪನೆಗೊಂಡು ₹೨.೫೮ ಕೋಟಿ ಅನುದಾನದೊಂದಿಗೆ ಪ್ರಾರಂಭಿಸಲಾಗಿತ್ತು. ನಂತರ ಆಮೆ ಗತಿಯಲ್ಲಿ ಸಾಗಿದ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿ ರೈತಸಂಘ ಅಂದಿನ ಸಚಿವರಾಗಿದ್ದ ಸಿ.ಆರ್. ಸಗೀರ್ ಅಹಮದ್ ಅವರ ಮನೆ ಮುಂದೆ ಅಹೋರಾತ್ರಿ ಚಳುವಳಿ ನಡೆಸಿದ ಪರಿಣಾಮ ಜಾಕ್‌ವೆಲ್, ಇಂಟಕ್ ವೆಲ್ ಪಂಪ್‌ಹೌಸ್ ಹಾಗೂ ಕಂಬೀಹಳ್ಳಿವರೆಗೆ ಪೈಪ್‌ಲೈನ್ ಕಾಮಗಾರಿ ಪ್ರಾರಂಭವಾಯಿತು ಎಂದರು.

ಬದಲಾದ ರಾಜಕೀಯ ಸನ್ನಿವೇಶದಿಂದ ಯೋಜನಾ ವೆಚ್ಚ ಹೆಚ್ಚುವರಿಯಾಗಿ ₹೩.೫೦ ಕೋಟಿಗೆ ಮರು ಅಂದಾಜು ಮಾಡಿದ್ದು ಹೊರತುಪಡಿಸಿದರೆ ಕಾಮಗಾರಿಗೆ ಯಾವುದೇ ಚಾಲನೆ ದೊರೆಯಲಿಲ್ಲ. ಇದನ್ನು ವಿರೋಧಿಸಿ ಜನಪ್ರತಿನಿಧಿಗಳ ಮನೆ ಮುಂದೆ ಚಳುವಳಿ ನಡೆಸಿದಾಗ ₹೭.೫೦ ಕೋಟಿ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ದೊರೆತು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದ್ದ ಕಾಮಗಾರಿ ಕಾವೇರಿ ನೀರಾವರಿ ನಿಗಮಕ್ಕೆ ವರ್ಗಾಯಿಸಲಾಯಿತು ಎಂದು ಮಾಹಿತಿ ನೀಡಿದರು.ಈ ಸಂಬಂಧ ನಾಲಾ ಕಾಮಗಾರಿಗೆ ಭೂಮಿ ವಶಪಡಿಸಿಕೊಂಡ ರೈತರಿಗೆ ಅಲ್ಪಸ್ವಲ್ಪ ಪರಿಹಾರ ಕೊಟ್ಟು ಪ್ರಾರಂಭಗೊಂಡ ಕಾಮಗಾರಿ ವಿದ್ಯುತ್ ಪಂಪ್ ಅಳವಡಿಕೆ ಕಾರ್ಯಕ್ಕೆ ಸೀಮಿತವಾಯಿತು. ಭೂಮಿ ವಶಪಡಿಸಿಕೊಂಡ ರೈತರಿಗೆ ಪರಿಹಾರ ಕೊಡಲು ವಿಳಂಭ ಮಾಡಿದ ಪರಿಣಾಮ ಕಾಮಗಾರಿ ವೆಚ್ಚ ಏರುತ್ತಲೇ ಹೋಯಿತೇ ವಿನಾಃ ಕಾಮಗಾರಿ ಮಾತ್ರ ಪೂರ್ಣಗೊಳ್ಳಲಿಲ್ಲ ಎಂದು ಆರೋಪಿಸಿದರು.ಸದರಿ ಕಾಮಗಾರಿ ಪೂರ್ಣಗೊಂಡಿದ್ದರೆ ರೈತರ ಭೂಮಿಗೆ ನೀರೊದಗಿಸುವ ಜೊತೆಗೆ ಈ ಭಾಗದ ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಸ ಬಹುದಿತ್ತು. ಇದರಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಯೋಜನೆಯನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಲಿಲ್ಲ ಎಂದು ದೂರಿದ ಅವರು, ಈಗ ಕಾವೇರಿ ನೀರಾವರಿ ನಿಗಮದಲ್ಲಿ ₹೬.೫೦ ಕೋಟಿ ಇದ್ದು, ಅವಶ್ಯಕತೆ ಇರುವ ₹೮.೫೦ ಕೋಟಿ ಯನ್ನು ಈ ಬಾರಿ ಬಜೆಟ್‌ನಲ್ಲಿ ಮೀಸಲಿರಿಸಿ ನಿಗಮಕ್ಕೆ ಹಣ ಮಂಜೂರು ಮಾಡುವಂತೆ ಆಗ್ರಹಿಸಿದರು.ನಿಕಟಪೂರ್ವ ಗುರುಶಾಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ನೀರಾವರಿ ಯೋಜನೆ ಹಾಗೂ ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಿ ಸಮಗ್ರ ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಭೂಮಿಗೆ ನೀರೊದಗಿಸಬೇಕು. ಇಲ್ಲದಿದ್ದರೆ ಆಹಾರದ ಅಭಾವ ತಲೆದೋರಲಿದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್.ಡಿ, ಪ್ರಧಾನ ಕಾರ್ಯದರ್ಶಿ ಎಂ.ಬಿ ಚಂದ್ರಶೇಖರ್, ರಾಜ್ಯ ಸಮಿತಿ ವರಿಷ್ಠ ಕೆ.ಕೆ. ಕೃಷ್ಣೇಗೌಡ, ಮುಖಂಡರಾದ ಎಚ್.ಡಿ. ಉಮೇಶ್, ದಯಾನಂದ್, ರಾಮೇಗೌಡ, ಸೋಮೇಗೌಡ ಮತ್ತಿತರರು ಉಪಸ್ಥಿತರಿದ್ದರು.