ನಿರಂತರ ವಿದ್ಯುತ್, ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

| Published : May 15 2024, 01:32 AM IST

ನಿರಂತರ ವಿದ್ಯುತ್, ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನದಿಯಲ್ಲಿ ನೀರಿದ್ದರೂ ಕರೆಂಟ್ ಇಲ್ಲದೇ ರೈತರ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ನದಿ ತೀರದ ರೈತರ ಪಂಪ್‌ಸೆಟ್‌ಗಳಿಗೆ ದಿನಾಲೂ 7 ಗಂಟೆ ನಿರಂತರ ಥ್ರಿಫೆಸ್ ವಿದ್ಯುತ್ ನೀಡಬೇಕು ಮತ್ತು ಬರ ಪರಿಹಾರದಲ್ಲಾಗಿರುವ ಲೋಪಗಳನ್ನು ಸರಿ ಪಡಿಸಿ ಎಲ್ಲ ರೈತರಿಗೂ ಬರ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಉಗಾರ ಬುದ್ರಕ್, ಮೊಳವಾಡ, ಕುಸನಾಳ ಗ್ರಾಮಗಳ ರೈತರು ಮತ್ತು ನವಚಿಗುರು ರೈತ ಸಂಘಟನೆಯವರು ಸೇರಿ ಉಗಾರ ಬುದ್ರಕ್ ಗ್ರಾಮದ ಮಹಾವೀರ ವೃತ್‌ದಲ್ಲಿ ಮಂಗಳವಾರ ಕಾಗವಾಡ-ಜಮಖಂಡಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಮೋಹರಾವ್ ಶಹಾ, ಉಗಾರ ಬುದ್ರಕ್ ಮುಖಂಡ ಶೀತಲಗೌಡ ಪಾಟೀಲ ಮಾತನಾಡಿ, ಈಗಾಗಲೇ ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಅನೇಕ ಗ್ರಾಮಗಳಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ನಾವೂ ಸಹ ಕಾಗವಾಡ ತಾಲೂಕಿನಲ್ಲಿಯೇ ಇದ್ದು, ನಮಗೆ ಏಕೆ ಅನ್ಯಾಯ ಮಾಡುತ್ತಿದ್ದೀರಿ?. ಇದಲ್ಲದೇ ಬರ ಪರಿಹಾರ ನೀಡುವಲ್ಲಿ ಸಾಕಷ್ಟು ಲೋಪಗಳಾಗಿದ್ದು ಶೇ.75 ರಷ್ಟು ರೈತರಿಗೆ ಬರ ಪರಿಹಾರ ದೊರೆತಿಲ್ಲ. ಎಲ್ಲ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಬೆಳಗ್ಗೆ 10 ಗಂಟೆಯಿಂದ ರಸ್ತೆ ತೆಡೆ ನಡೆಸಿದ್ದರಿಂದ ನೂರಾರು ವಾಹನಗಳು ಪರ್ಯಾಯ ಮಾರ್ಗ ಹುಡುಕುವಂತಾಯಿತು. ಮಹಾರಾಷ್ಟ್ರಕ್ಕೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಯಿತು. ಸುಮಾರು 2 ಗಂಟೆಗಳ ಕಾಲ ನಡೆದ ಪ್ರತಿಭಟನೆಗೆ ಕಾಗವಾಡ ಪಿಎಸ್‌ಐ ಎಂ.ಬಿ.ಬಿರಾದಾರ, ತಹಸೀಲ್ದಾರ್‌ ಎಸ್.ಬಿ.ಇಂಗಳೆ, ಹೆಸ್ಮಾಂ ಎಇಇ ದುರ್ಯೋಧನ ಮಾಳಿ, ಹೆಸ್ಮಾಂ ಶಾಖಾಧಿಕಾರಿ ವಿಜಯ ಮಹಾಂತೇಶ ಸವದಿ ಆಗಮಿಸಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರತಿಭಟನಾ ನಿರತ ರೈತರು ಜಗ್ಗದೇ ಪ್ರತಿಭಟನೆ ಮುಂದುವರೆಸಿದರು.ಈ ವೇಳೆ ತಹಸೀಲ್ದಾರ್‌ ಎಸ್.ಬಿ.ಇಂಗಳೆ ಜಿಲ್ಲಾಧಿಕಾರಿಳನ್ನು ಸಂಪರ್ಕಿಸಿ 6 ಗಂಟೆ ವಿದ್ಯುತ್ ನೀಡುವ ಮತ್ತು ಬರ ಪರಿಹಾರದ ಲೋಪಗಳನ್ನು ಸರಿ ಪಡಿಸುವ ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.ಈ ಸಮಯದಲ್ಲಿ ಮುಖಂಡರಾದ ವಜ್ರಕುಮಾರ ಮಗದುಮ್, ಪ್ರಶಾಂತ ವಸವಾಡೆ, ಜಯಪಾಲ ಯರಂಡೋಲೆ, ಅಶೋಕ ನಾಂದಣಿ, ಚಿದಾನಂದ ಅಥಣಿ, ಅಭಿಷೇಕ ಚೌಗುಲೆ, ಪದ್ಮಕುಮಾರ ಆಳಪ್ಪನವರ, ಪದ್ಮಾಣ್ಣ ಚೌಗುಲೆ ಸೇರಿದಂತೆ ನವಚಿಗುರು ರೈತ ಸಂಘಟನೆಯ ಪದಾಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾಗವಾಡ ಪೊಲೀಸ್‌ರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು.

ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣ ನೀರಿದ್ದರೂ ಜಿಲ್ಲಾಡಳಿತ ತನ್ನ ಮೊಂಡು ತನದ ಧೋರಣೆಯಿಂದ ವಿದ್ಯುತ್ ಕಡಿತ ಮಾಡಿ ರೈತ ವಿರೋಧಿ ಧೋರಣೆ ತಾಳಿದ್ದು ನಾಚಿಕೆಗೇಡಿನ ಸಂಗತಿ. ಕಡ್ಲಿ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡ್ಲಿ ಇಲ್ಲದಂತಾ ಪರಿಸ್ಥಿತಿ ರೈತರದ್ದಾಗಿದೆ.

-ಶೀತಲಗೌಡ ಪಾಟೀಲ,

ರೈತಪರ ಹೋರಾಟಗಾರ.