ಬಳ್ಳಾರಿ: ಹರಗಿನಡೋಣಿ ಗ್ರಾಮಕ್ಕೆ ಕುಡಿವ ನೀರಿನ ಕೆರೆ ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಃಶ್ಚೇತನ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮದ ನೂರಾರು ಜನರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಯಾದ ಕುಡಿವ ನೀರಿಗೆ ಕೆರೆ ನಿರ್ಮಿಸುವ ಕೆಲಸ ಇನ್ನು ಪೂರ್ಣವಾಗಿಲ್ಲ. ಇದರಿಂದ ಜನ ಜಾನುವಾರುಗಳು ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಬೇಸಿಗೆಯಲ್ಲಿ ನೀರಿಗಾಗಿ ತತ್ವಾರ ಎದುರಾಗುತ್ತದೆ. ಇಷ್ಟಾಗಿಯೂ ಕೆರೆ ನಿರ್ಮಿಸುವ ಕುರಿತು ಜಿಲ್ಲಾಡಳಿತ ಕ್ರಮ ವಹಿಸುತ್ತಿಲ್ಲ. ಸುಸಜ್ಜಿತ ಶಾಲೆ, ಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ, ಗಣಿ ಕಾರ್ಮಿಕರಿಗೆ ಅರಣ್ಯ ಪರಿಸರ ರಕ್ಷಣೆಯ ಕೆಲಸ, ಮಹಿಳೆಯರಿಗೆ, ಯುವಕರಿಗೆ ಕೌಶಲ್ಯ ಆಧಾರಿತ ತರಬೇತಿ ಸೇರಿದಂತೆ ಜನರ ಬದುಕು ಹಸನುಗೊಳಿಸುವ ಯಾವುದೇ ಕೆಲಸಗಳಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಂಚಾಲಕಿ ಡಿ.ನಾಗಲಕ್ಷ್ಮಿ ಮಾತನಾಡಿ, ಕಳೆದ ಎರಡು ದಶಕಗಳಿಂದ ನಡೆದ ಗಣಿಗಾರಿಕೆಯಿಂದ ಜಿಲ್ಲೆಯ ಪರಿಸರ ಹಾಗೂ ಜನರ ಬದುಕು ಮೂರಾಬಟ್ಟೆಯಾಗಿದೆ. ಅಕ್ರಮ ಗಣಿಗಾರಿಕೆಯಿಂದ ಗಣಿಭಾದಿತ ಪ್ರದೇಶದಲ್ಲಿ ವಿಧ್ವಂಸಗೊಂಡಿದ್ದ ಜನರ ಬದುಕು ಮತ್ತು ಪರಿಸರ ಪುನಶ್ಚೇತನಗೊಳಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ತಾಲೂಕಿನ ಹರಗಿನಡೋಣಿ ಗ್ರಾಮವು ಸಹ ಗಣಿಬಾಧಿತ ಪ್ರದೇಶದೊಳಗೆ ಬರುತ್ತಿದ್ದು, ಈ ಭಾಗದ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ. ಕುಡಿವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಯಾವುದೇ ಕಾಳಜಿಯ ನಿರ್ಧಾರ ಕೈಗೊಂಡಿಲ್ಲ ಎಂದು ದೂರಿದರು.
ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಸೋಮಶೇಖರ್ ಗೌಡ, ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನಕ್ಕೆ ಸರ್ವೋಚ್ಚ ನ್ಯಾಯಾಲಯವು ಬೃಹತ್ ಕಾರ್ಯ ಯೋಜನೆಯನ್ನು ರೂಪಿಸಿ, ಹಣಕಾಸಿನ ಸ್ವತಂತ್ರ ಮೂಲವನ್ನು ಒದಗಿಸಿ ಕೊಟ್ಟಿದೆ. ಈ ಆದೇಶದ ಪ್ರಕಾರ ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ (ಕೆಎಂಇಆರ್‌ಸಿ) ಬಳಿ ಸುಮಾರು 35 ಸಾವಿರ ಕೋಟಿಗೂ ಮೀರಿ ಹಣಕಾಸು ಸಂಪನ್ಮೂಲವಿದೆ. ಇದನ್ನು ಬಳಸಿಕೊಂಡು ಕೆಎಂಇಆರ್‌ಸಿ ಸಂಸ್ಥೆಯು ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಕಾರ್ಯವನ್ನು ಜಾರಿಗೊಳಿಸಬೇಕಿತ್ತು. ಆದರೆ, ಈ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸದ ಕಾರಣ ಗಣಿಬಾಧಿತ ಪ್ರದೇಶಗಳು ಸೌಲಭ್ಯಗಳಿಲ್ಲದೇ ನರಳುವಂತಾಗಿದೆ ಎಂದು ತಿಳಿಸಿದರು.ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್ ಮಾತನಾಡಿದರು. ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಶೇಖರ, ಮುಖಂಡರಾದ ಮಹಾರುದ್ರಗೌಡ, ಆರ್. ಶಿವರಾಮ ರೆಡ್ಡಿ, ಡಿ.ಈರಣ್ಣ, ಬುಗ್ಗೇಶ್, ಎಚ್.ರಾಜನಗೌಡ, ಬಿ.ಬಸವನಗೌಡ, ಬಿ. ಹೆಚ್. ನಿಂಗಮ್ಮ, ಕೆ. ಎಂ. ವೀರಭದ್ರಯ್ಯ ಸ್ವಾಮಿ, ರಮೇಶ್ ಗೌಡ, ಹೆಚ್. ಶಿವರಾಮ ಗೌಡ, ಎಚ್.ಹನುಮಂತಪ್ಪ, ಎ.ಗಂಗಾಧರ, ಕೆ.ಜಂಬಯ್ಯ, ಲಕ್ಷ್ಮಿ ದೇವಿ, ಟಿ.ಎಂ.ಗೀತಾ, ಬಿ.ಎನ್. ಉಮಾದೇವಿ ಸೇರಿದಂತೆ ಗ್ರಾಮದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಗರದ ಗಾಂಧಿಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.