ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ತಾಲೂಕಿನ ಕೊತ್ತೂರು ಗ್ರಾಪಂನ ದಾಸಪ್ಪನಹಟ್ಟಿ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಹಾಗೂ ರಾತ್ರಿ ವೇಳೆ ಕಾಡುಪ್ರಾಣಿಗಳು ಊರೊಳಗೆ ಪ್ರವೇಶಿಸಿ ಮನೆಗಳಿಗೆ ನುಗ್ಗುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ರೈತ ಸಂಘದ ತಾಲೂಕು ಶಾಖೆಯ ವತಿಯಿಂದ ಇಲ್ಲಿನ ಬೆಸ್ಕಾಂ ಕಚೇರಿಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಅವರು, ಪಾವಗಡ ತಾಲೂಕಿನ ಕೊತ್ತೂರು ಗ್ರಾಪಂನ ದಾಸಪ್ಪನಹಟ್ಟಿ ಗ್ರಾಮವಿದ್ದು 20ಕ್ಕಿಂತ ಹೆಚ್ಚು ಕುಟುಂಬಗಳು ವಾಸಲಾಗಿವೆ. ವಿದ್ಯುತ್ ಕಂಬಗಳು ಇದ್ದರೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಇಲ್ಲದ ಪರಿಣಾಮ ರೈತರ ಪಂಪ್‌ಸೆಟ್‌ಗಳ ಮೋಟರ್ ಪೇಸ್‌ಗೆ ಕೊಟ್ಟಾಗ ಮಾತ್ರ ಮನೆಗಳಿಗೆ ವಿದ್ಯುತ್ ಸರಬರಾಜು ಆಗುತ್ತದೆ. ಇಲ್ಲದಿದ್ದರೆ ಸದಾ ಕಾಲ ಕರೆಂಟ್ ಇರುವುದಿಲ್ಲ. ಪರಿಣಾಮ ರಾತ್ರಿ ವೇಳೆ ಮನೆಗಳಲ್ಲಿ ಮಕ್ಕಳ ವ್ಯಾಸಂಗಕ್ಕೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಮೊಬೈಲ್ ಟಾರ್ಟ್ ಹಾಗೂ ಸೀಮೆ ಎಣ್ಣೆಯ ದ್ವೀಪದ ಬೆಳಕಿನಲ್ಲಿ ಪಾಠ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ವಿದ್ಯುತ್ ಇಲ್ಲದ ಸಮಯದಲ್ಲಿ ಕಗ್ಗತ್ತಲು ಆವರಿಸಿ ಕಾಡಂದಿ , ಕರಡಿ, ಚಿರತೆ, ನರಿ, ಕಾಡುಬೆಕ್ಕು ಇತರೆ ಕಾಡು ಕಾಡು ಪ್ರಾಣಿಗಳು ಊರೊಳಗೆ ನುಗ್ಗುತ್ತಿವೆ. ಇದರಿಂದ ಗ್ರಾಮಸ್ಥರು ಭಯಾಭೀತರಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ನಿರಂತರ ಜ್ಯೋತಿ ಅಡಿಯಲ್ಲಿ ವಿದ್ಯುತ್ ಸರಬರಾಜ್ ಮಾಡುವಲ್ಲಿ ಬೆಸ್ಕಾಂ ಎಇಇ ಹಾಗೂ ಜೆಇಗಳು ನಿರ್ಲಕ್ಷ್ಯವಹಿಸಿದ್ದಾರೆ. ವಿದ್ಯುತ್ ಬೆಳಕಿಲ್ಲದ ವೇಳೆ ಕಾಡು ಪ್ರಾಣಗಳಿಂದ ಪ್ರಾಣಹಾನಿ ಸಂಭವಿಸಿದರೆ ಅದರ ಹೊಣೆ ಬೆಸ್ಕಾಂ ಅಧಿಕಾರಿಗಳು ಹೊರಬೇಕಾಗುತ್ತದೆ ಎಂದು ಆರೋಪಿಸಿದರು.
ಇದೇ ರೀತಿ ಗಡಿ ಪ್ರದೇಶಗಳಾದ ತಾಲೂಕಿನ ಕೊತ್ತೂರು, ಪೆಮ್ಮನಹಳ್ಳಿ, ಅರಸೀಕೆರೆ, ಎಸ್.ಆರ್.ಪಾಳ್ಯ, ಕಲಾರಾಜಮ್ಮನಹಳ್ಳಿ ಸೇರಿದಂತೆ ಇನ್ನೂ ತಾಲೂಕಿನ ವೈ.ಎನ್.ಹೊಸಕೋಟೆ, ಕಸಬಾ, ನಾಗಲಮಡಿಕೆ ಹೋಬಳಿಯ ಗಡಿ ಗ್ರಾಮಗಳಿಗೆ ಸಂಜೆ 6ರಿಂದ ಬೆಳಿಗ್ಗೆ 6 ವರೆಗೆ ಗಂಟೆಯವರೆಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವ ಮೂಲಕ ಕಡ್ಡಾಯವಾಗಿ ವಿದ್ಯುತ್ ಸರಬರಾಜು ಕಲ್ಪಿಸಬೇಕು. ಕಾಡುಪ್ರಾಣಿಗಳ ಪ್ರವೇಶ ತಡೆಗಟ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಸ್ಕಾಂ ವಿರುದ್ಧ ರೈತ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದಾಗಿ ಎಚ್ಚರಿಸಿದರು. ಬಳಿಕ ಇಲ್ಲಿನ ತಾಲೂಕು ಬೆಸ್ಕಾಂ ಎಇಇ ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿದ್ದು ಇನ್ನೂ ಎರಡು ಮೂರು ದಿನದ ಒಳಗೆ ಸಮಸ್ಯೆ ಬಗೆಹರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ, ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವು, ಸದಾಶಿವಪ್ಪ, ಹನುಮಕ್ಕ, ಸಿದ್ದಮ್ಮ, ರಾಮಾಂಜಿನೇಯ, ರಮೇಶ್ ಇತರರಿದ್ದರು.