ಸಾರಾಂಶ
ಶ್ರೀ ಕ್ಷೇತ್ರದ ಮೇಲೆ ನಿರಂತರ ಅಪಪ್ರಚಾರ ನಡೆಸುತ್ತಿರುವ ಸಮಾಜ ದ್ರೋಹಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಕಿಡಿಗೇಡಿಗಳು ಅಪಪ್ರಚಾರದಲ್ಲಿ ತೊಡಗಿದ್ದು, ಕ್ಷೇತ್ರದ ಮೇಲೆ ತಪ್ಪು ಭಾವನೆ ಮೂಡುವಂತೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಕ್ತಾಭಿಮಾನಿಗಳ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ಪಟ್ಟಣದ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಜೇಸೀ ವೇದಿಕೆಯಲ್ಲಿ ಜನಾಗ್ರಹ ಸಭೆ ಆಯೋಜಿಸಲಾಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಶ್ರೀಕ್ಷೇತ್ರದ ಮೇಲೆ ನಿರಂತರ ಅಪಪ್ರಚಾರ ನಡೆಸುತ್ತಿರುವ ಸಮಾಜ ದ್ರೋಹಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.ಧರ್ಮಸ್ಥಳದ ಬಗ್ಗೆ ಸಮೀರ್ ಎಂಬಾತ ಕಟ್ಟುಕಥೆಯನ್ನು ಮಾಡಿ ಜನರ ಹಾದಿ ತಪ್ಪಿಸಿದ್ದಾನೆ. ಈತನ ಹಿಂದೆ ವಿದೇಶಿ ಮೂಲದ ಕೈಗಳೂ ಅಡಗಿವೆ. ಕ್ಷೇತ್ರಕ್ಕೆ ಧಕ್ಕೆ ತರುವ ಕಾರ್ಯಕ್ಕೆ ಅಲ್ಲಿಂದಲೂ ಹಣ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇದರೊಂದಿಗೆ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣ, ವಕೀಲ ದ್ವಾರಕಾನಾಥ್ ಅವರುಗಳನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದರು.ಮುಳ್ಳೂರು ಕ್ಷೇತ್ರದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಷಡ್ಯಂತ್ರದ ವಿರುದ್ಧ ಎಲ್ಲರೂ ದನಿಯೆತ್ತಬೇಕು. ನಮ್ಮೊಳಗೆ ಧರ್ಮ ಜಾಗೃತಿ ಮೂಡಬೇಕು. ಇಂದು ಧರ್ಮಸ್ಥಳಕ್ಕೆ ಆದಂತಹ ಅಪಮಾನ ನಾಳೆ ನಮ್ಮೂರಿನ ದೇವಾಲಯ, ನಮ್ಮ ಮನೆಗಳ ಮೇಲೂ ಆಗಬಹುದು. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳಿಗೆ ಇಂತಹದೇ ದುಸ್ಥಿತಿ ಬರುತ್ತಿದೆ. ಮುಖ್ಯಮಂತ್ರಿ ಈ ವರೆಗೆ ಧರ್ಮಸ್ಥಳ ಪರವಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಹಿಂದುತ್ವದ ವಿರುದ್ಧವಾದ ಧೋರಣೆ ಬಿಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಕ್ಷೇತ್ರದಿಂದ ಈವರೆಗೆ 81, 603 ಕೋಟಿ ಅನುದಾನವನ್ನು ಸಾಮಾಜಿಕ ಕಾರ್ಯಗಳಿಗೆ ನೀಡಲಾಗಿದೆ. ಇದನ್ನು ಸಹಿಸದ ಮಂದಿ ಕ್ಷೇತ್ರದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ಇಡೀ ಪ್ರಕರಣವನ್ನು ಎನ್.ಐ.ಎ. ತನಿಖೆಗೆ ಕೊಡಬೇಕು. ಮುಖವಾಡದ ಹಿಂದೆ ಇರುವ ವ್ಯಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿದರು. ಬೇಡಿಕೆಗಳ ಮನವಿ ಪತ್ರವನ್ನು ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಇದೇ ಪ್ರಕರಣದಲ್ಲಿ ಸಮೀರ್ ಹಾಗೂ ಸುಜಾತಾ ಭಟ್ ಅವರು ಸುಳ್ಳು ಮಾಹಿತಿ ನೀಡಿ ಕೊಡಗಿನ ಯುವತಿಯ ಹೆಸರನ್ನು ದುರ್ಬಳಕೆ ಮಾಡಿದ್ದು, ಇವರುಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಲಾಯಿತು.ಸಭೆಯ ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಪುಂಡರೀಕ, ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ವಿರಕ್ತ ಮಠಾಧೀಶರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ವಕೀಲ ಕಾಟ್ನಮನೆ ವಿಠಲ್ ಗೌಡ, ಸಮಿತಿಯ ಅಧ್ಯಕ್ಷ ಎಸ್.ಆರ್. ಸೋಮೇಶ್, ಸಂಚಾಲಕ ಸುರೇಶ್ ಸೇರಿದಂತೆ ಇತರರು ಇದ್ದರು.