ಸಾರಾಂಶ
ಕೊಟ್ಟೂರು: ಲೋಕಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಕುರಿತಾಗಿ ಅಸಭ್ಯವಾಗಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಂವಿಧಾನ ಸಂವಿಧಾನ ಸಂರಕ್ಷಣಾ ಸಮಿತಿಯವರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು, ಡಿಎಸ್‌ಎಸ್ ಪದಾಧಿಕಾರಿಗಳು ಸೇರಿ ಇತರೆ ಸಂಘಟನೆಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆಕಾರರು ಅಮಿತ್ ಶಾ ವಿರದ್ಧ ಘೋಷಣೆಗಳನ್ನು ಕೂಗಿ, ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ಜಾತಿಯ ಜನರಿಗೆ ನ್ಯಾಯ ಒದಗಿಸಿದ್ದು ಅಂಬೇಡ್ಕರ್ ಅವರ ಸಂವಿಧಾನ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಪದೇಪದೇ ಹೇಳುತ್ತೀರಲ್ಲ ಎಂದು ಅಸಂಬದ್ಧವಾಗಿ ಮಾತನಾಡಿದ ಸಚಿವ ಅಮಿತ್ ಶಾ ಕೂಡಲೇ ದೇಶದ ಜನತೆ ಕ್ಷಮೆ ಯಾಚಿಸಬೇಕು. ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.ಡಿಎಸ್‌ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ, ಟಿ.ಕೊಟ್ರೇಶ್, ಟಿ.ಹನುಮಂತ ಮಾತನಾಡಿ, ಅಂಬೇಡ್ಕರ್ ಪಾದ ಧೂಳಿಗೆ ಸಮ ಇಲ್ಲದವರು ಇಂದು ಅವರು ರಚಿಸಿದ ಸಂವಿಧಾನ ದೆಸೆಯಿಂದಲೇ ಅಧಿಕಾರ ಪಡೆದು, ಈಗ ಅವರನ್ನೇ ತೆಗಳುವ ಕೆಟ್ಟ ವರ್ತನೆ ತೋರುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಕೇವಲ ದೇಶದ ಜನತೆಯಲ್ಲ ಇಡೀ ಜಗತ್ತೇ ಮೆಚ್ಚಿಕೊಂಡು ಇಂದಿಗೂ ಗೌರವ ನೀಡುತ್ತಿದೆ. ಆದರೆ ನಮ್ಮ ದೇಶದ ಕೆಲವರು ಉದ್ದೇಶಪೂರ್ವಕವಾಗಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು, ಸಂವಿಧಾನಕ್ಕೆ ಅಪಚಾರ ಮಾಡುವ ಕೃತ್ಯ ಎಸಗುತ್ತಿರುತುವುದು ಖಂಡನೀಯ. ಕೂಡಲೇ ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತು ಹಾಕಬೇಕು. ಅಮಿತ್ ಶಾ ಹಾಗೂ ಅವರಂತರವರ ವಿರುದ್ಧ ಬೃಹತ್ ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಪಿ ಹೆಚ್ ದೊಡ್ಡರಾಮಣ್ಣ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ. ದಾರುಕೇಶ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಣ್ಣ ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಬಿ.ಎಸ್.ವೀರೇಶ, ಶಿವಕುಮಾರಗೌಡ, ಮೂಗಣ್ಣ, ಶಿವಕುಮಾರ, ಡಿಎಸ್‌ಎಸ್ ಪದಾಧಿಕಾರಿಗಳು, ಸದಸ್ಯರು ಇದ್ದರು. ನಂತರ ಗ್ರೇಡ್ 2 ತಹಸೀಲ್ದಾರರಿಗೆ ಪ್ರತಿಭಟನೆಕಾರರು ಮನವಿ ಅರ್ಪಿಸಿದರು.