ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

| Published : Dec 25 2024, 12:45 AM IST

ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಒಣಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ.

ಬಳ್ಳಾರಿ: ಬಳ್ಳಾರಿ ಹೊರ ವಲಯದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆ ಸಹಯೋಗದಲ್ಲಿ ರೈತ ಸಂಘಟನೆಗಳ ಸದಸ್ಯರು ಹಾಗೂ ವರ್ತಕರು ಎಪಿಎಂಸಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಬಳ್ಳಾರಿ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಒಣಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ. ದೂರದ ಬ್ಯಾಡಗಿಗೆ ರೈತರು ಮೆಣಸಿನಕಾಯಿ ಸಾಗಾಟ ಮಾಡುವುದರಿಂದ ಸಾಗಾಟ ವೆಚ್ಚ ಭರಿಸಲು ಕಷ್ಟದಾಯಕವಾಗಿದೆ. ವರ್ಷದಿಂದ ವರ್ಷಕ್ಕೆ ಸಾಗಾಟದ ವೆಚ್ಚ ಏರಿಕೆಯಾಗುತ್ತಿರುವುದು ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಲೇ ಬರಲಾಗಿದೆ. ಆದರೆ, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಬರೀ ಭರವಸೆಗಳನಷ್ಟೇ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಯಶ್ವಂತ ನಾಗಿರೆಡ್ಡಿ, ಮೆಣಸಿನಕಾಯಿ ಮಾರುಕಟ್ಟೆಗೆ ಬಳ್ಳಾರಿ ಹೊರ ವಲಯದ ಆಲದಹಳ್ಳಿ ಬಳಿ ಜಮೀನು ಪಡೆಯಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಾಣದ ಉದ್ದೇಶವಿದೆ. ಆದರೆ, ಖಾಸಗಿಯವರು ಯಾರೂ ಅರ್ಜಿ ಸಲ್ಲಿಸಿಲ್ಲ. ಹೀಗಾಗಿಯೇ ಮಾರುಕಟ್ಟೆ ನಿರ್ಮಾಣದ ಉದ್ದೇಶಕ್ಕೆ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಆದಷ್ಟು ಬೇಗ ಮಾರುಕಟ್ಟೆ ಸ್ಥಾಪಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಮುನ್ನ ಎಪಿಎಂಸಿಯಲ್ಲಿ ಸಭೆ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಳಿಕ ಮಾರುಕಟ್ಟೆ ಬಂದ್ ಮಾಡಿದರು. ಇದರಿಂದ ಇಡೀ ದಿನ ವ್ಯಾಪಾರ-ವಹಿವಾಟು ಬಂದ್ ಆಗಿತ್ತು.

ಎಪಿಎಂಸಿಯಿಂದ ಬೆಂಗಳೂರು ರಸ್ತೆಯ ಮೂಲಕ ಗಡಗಿಚನ್ನಪ್ಪ ವೃತ್ತದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮಾಜಿ ಬುಡಾ ಅಧ್ಯಕ್ಷ ಪಾಲಣ್ಣ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಪದಾಧಿಕಾರಿಗಳಾದ ಮಹಾರುದ್ರಗೌಡ, ವಿ.ರಾಮಚಂದ್ರ, ಕನ್ನಡನಾಡು ರೈತ ಸಂಘದ ಅಧ್ಯಕ್ಷ ಮೆಣಸಿನ ಈರಪ್ಪ ಸೇರಿದಂತೆ ಎಪಿಎಂಸಿ ವರ್ತಕರು, ಹಮಾಲರ ಸಂಘದ ಸದಸ್ಯರು ಹಾಗೂ ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸಹಯೋಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.