ಮೆಕ್ಕೆಜೋಳಕ್ಕೆ ₹ 3 ಸಾವಿರ ಕನಿಷ್ಠ ಬೆಂಬಲ ಘೋಷಣೆ ಮತ್ತು ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ರೈತ ಸಂಘಗಳ ಒಕ್ಕೂಟಗಳ ಸಾಮೂಹಿಕ ನಾಯಕತ್ವದಡಿ ಸೋಮವಾರ ತಾಲೂಕಿನ ಹುಲಿಹಳ್ಳಿ ಬಳಿಯಿರುವ ಮೆಗಾ ಮಾರ್ಕೇಟ್ ಮುಂಭಾಗದಲ್ಲಿ ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ಮೆಕ್ಕೆಜೋಳಕ್ಕೆ ₹ 3 ಸಾವಿರ ಕನಿಷ್ಠ ಬೆಂಬಲ ಘೋಷಣೆ ಮತ್ತು ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ರೈತ ಸಂಘಗಳ ಒಕ್ಕೂಟಗಳ ಸಾಮೂಹಿಕ ನಾಯಕತ್ವದಡಿ ಸೋಮವಾರ ತಾಲೂಕಿನ ಹುಲಿಹಳ್ಳಿ ಬಳಿಯಿರುವ ಮೆಗಾ ಮಾರ್ಕೇಟ್ ಮುಂಭಾಗದಲ್ಲಿ ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೈತರ ಹೋರಾಟ ಬೆಂಬಲಿಸಿ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಮಣಕವಾಡದ ಮೃತ್ಯುಂಜಯ ಸ್ವಾಮಿಗಳು, ಕೂಡಲದ ಗುರು ಮಹೇಶ್ವರ ಸ್ವಾಮಿಗಳು, ಹೆರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮಿಗಳು, ಬಿಜಾಪುರ ಷಣ್ಮುಖಾರೂಢ ಮಠದ ಸಿದ್ಧಾರೂಢ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ವಿರೂಪಾಕ್ಷ ಸ್ವಾಮಿಗಳು, ರಾಮಕೃಷ್ಣ ಸ್ವಾಮಿಗಳು ಸಾಥ್ ನೀಡಿದರು. ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಪ್ರಸ್ತುತ ಇಲ್ಲಿನ ಮೆಗಾ ಮಾರ್ಕೇಟ್‌ನಲ್ಲಿ ಈ ಟೆಂಡರ್ ಮೂಲಕ ಮೆಕ್ಕೆಜೋಳವನ್ನು ರು.1700ರಿಂದ 1950ರ ವರೆಗೆ ಮಾತ್ರ ಖರೀದಿ ಮಾಡಲಾಗುತ್ತಿದೆ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಾರುಕಟ್ಟೆಯಲ್ಲಿ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿವೆ. ಆದರೆ ರೈತರು ಹೊಲದಲ್ಲಿ ಬೆವರು ಸುರಿಸಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಮಾತ್ರ ಸೂಕ್ತ ಬೆಲೆ ದೊರಕದಿರುವುದು ನಿಜಕ್ಕೂ ವಿಪರ‍್ಯಾಸದ ಸಂಗತಿಯಾಗಿದೆ. ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ರು.3000 ಕನಿಷ್ಠ ಬೆಂಬಲ ಬೆಲೆ ಘೋಷಿಸಿ ತಕ್ಷಣವೇ ಖರೀದಿ ಕೇಂದ್ರ ಪ್ರಾರಂಭಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.ಹನುಮಂತಪ್ಪ ದಿವಿಗಿಹಳ್ಳಿ, ಕುಸಗೂರ, ಯು.ಆರ್. ಗುರುಲಿಂಗಪ್ಪಗೌಡ್ರ, ಮಹೇಶ ಕೊಟ್ಟೂರ, ರಾಜಶೇಖರ ದೂದಿಹಳ್ಳಿ, ಮಂಜುನಾಥ ಸಂಭೋಜಿ, ಲಲಿತಾ ಲಮಾಣಿ, ಶೈಲಮ್ಮ ಅರಳಗೇರಿ, ಬಸವರಾಜ ಮೇಗಳಗೇರಿ, ನೀಲಮ್ಮ ಮೇಗಳಗೇರಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.