ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಮಾಜಿ ದೇವದಾಸಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.ಸಂಘದ ಅಧ್ಯಕ್ಷೆ ರೇಣುಕಮ್ಮ ಮಾತನಾಡಿ, ಎಲ್ಲಾ ದೇವದಾಸಿಯರ ಮಾಸಿಕ ಪಿಂಚಣಿ ಸಹಾಯಧನವನ್ನು ಈ ಬಜೆಟ್‌ನಲ್ಲಿ ಕನಿಷ್ಠ 3 ಸಾವಿರ ರು. ಗಳಿಗೆ ಹೆಚ್ಚಿಸಬೇಕು. ಸರ್ವೇ ಪಟ್ಟಿಯಲ್ಲಿ ಕೈಬಿಟ್ಟ ಮಾಜಿ ದೇವದಾಸಿಯರ ಮತ್ತು ಎಲ್ಲಾ ದೇವದಾಸಿಯರ ಕುಟುಂಬದ ಸರ್ವೇ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.ಮಹಿಳಾ ಅಭಿವೃದ್ಧಿ ನಿಗಮವು ಎಲ್ಲಾ ದೇವದಾಸಿಯರ ಕುಟುಂಬದ ಎಲ್ಲಾ ಸದಸ್ಯರ ಗಣತಿಗೆ ಕೂಡಲೇ ಕ್ರಮವಹಿಸಬೇಕು. ಆದರೆ ಅದನ್ನು ಆನ್‌ಲೈನ್‌ನಲ್ಲಿ ತುಂಬಲು ತಿಳಿಸಿದ್ದು, ಅಲ್ಲಿಗೆ ಹೋಗಿ ಮಹಿಳೆಯರು ಕುಟುಂಬ ಸಮೇತ ತೆರಳಿ ನೋಂದಾಯಿಸಬೇಕೆಂದಿದೆ. ಇದು ಕಷ್ಟದಾಯಕ ಹಾಗೂ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವುದಲ್ಲದೆ ಇದರಲ್ಲಿ ನಿಜವಾದ ಫಲಾನುಭವಿಗಳು ಇಲ್ಲದೇ ಇರುವವರು ಸೇರಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಇದನ್ನು ತಡೆದು ಈ ಹಿಂದಿನಂತೆ ಅಂಗನವಾಡಿ ಕೇಂದ್ರ ಮತ್ತು ಕಾರ್ಯಕರ್ತೆಯರ ಮೂಲಕ ಗಣತಿಗೆ ಕ್ರಮವಹಿಸಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ದೇವದಾಸಿಯರಿಗೆ ಸ್ವಯಂ ಉದ್ಯೋಗದಡಿ ಮೂರು ಸಾವಿರ ರು. ಸಹಾಯಧನ ನೀಡುತ್ತಿದ್ದು, ಇದು ಕೂಡ ಕಳೆದ ಮೂರು ವರ್ಷಗಳಿಂದ ನಿಲ್ಲಿಸಲಾಗಿದೆ. ಈಗಿನ ತೀವ್ರ ಬೆಲೆ ಏರಿಕೆಯ ಕಾಲದಲ್ಲಿ ಅವರು ಸ್ವಯಂ ಉದ್ಯೋಗ ಹೊಂದಲು ನೆರವಾಗಲು ಈ ಹಿಂದೆ ಒಂದು ಲಕ್ಷ ರು.ಗಳನ್ನು ಕೊಡಲಾಗುತ್ತಿತ್ತು, ಅದನ್ನು ಹೆಚ್ಚಿಸಲು ಕ್ರಮವಹಿಸಿ ಬಿಡುಗಡೆ ಮಾಡಬೇಕು. ನಗರದಲ್ಲಿ ದೇವದಾಸಿಯರ ನಿವೇಶನಕ್ಕೆ ಮೀಸಲಿಟ್ಟಂತಹ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಕಾರ್ಯದರ್ಶಿ ಬಿ. ಮಾಳಮ್ಮ, ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ಕೆ.ಎ. ಪವನಕುಮಾರ, ಈರಮ್ಮ, ಹಂಪಮ್ಮ, ಕಮಲಮ್ಮ, ಯಲ್ಲಮ್ಮ, ಯಂಕಮ್ಮ ಮತ್ತಿತರರಿದ್ದರು.