ಸಾರಾಂಶ
ಹಾವೇರಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಹಂತ ಹಂತವಾಗಿ ಪ್ರತಿಭಟನೆ ಮಾಡುವ ಕುರಿತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು.2017ರ ವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು. ಪದವೀಧರ ಶಿಕ್ಷಕರೆಂದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದನಾಮೀಕರಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ಅನ್ಯ ಕಾರ್ಯಗಳಿಂದ ಹಾಗೂ ಆನ್‌ಲೈನ್ ಕೆಲಸಗಳಿಂದ ಶಿಕ್ಷಕರ ಮೇಲೆ ಆಗುತ್ತಿರುವ ಒತ್ತಡ ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಯಿತು. 2024ರ ಸೆ. 4ರಂದು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸುದೀರ್ಘ ಸಭೆ ನಡೆಸಿ ಒಂದು ಸಮಿತಿಯನ್ನು ರಚಿಸಿ, 30 ದಿನಗಳಲ್ಲಿ ಸಮಿತಿಯಿಂದ ವರದಿಯನ್ನು ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಭರವಸೆ ಈಡೇರದೇ ಇರುವುದರಿಂದ ಶಿಕ್ಷಕರಿಗೆ ತೀವ್ರ ನೋವಾಗಿದೆ. ಶಿಕ್ಷಕರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ ಮೂರು ಹಂತದಲ್ಲಿ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಆ. 27ರಂದು ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಆ. 27ರೊಳಗಾಗಿ ಬೇಡಿಕೆ ಈಡೇರದಿದ್ದಲ್ಲಿ ಸೆ. 3ರಂದು ರಾಜ್ಯದ ಶಿಕ್ಷಕರೊಡಗೂಡಿ ಎಲ್ಲ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಚುನಾಯಿತ ಪದಾಧಿಕಾರಿ, ಪ್ರತಿನಿಧಿಗಳು, ನಾಮನಿರ್ದೇಶನ ಸದಸ್ಯರನ್ನೊಳಗೊಂಡು ರಾಜ್ಯ ಮಟ್ಟದ ಬೃಹತ್ ಅಂತಿಮ ಹೋರಾಟ ಮಾಡಲು ಫ್ರೀಡಂ ಪಾರ್ಕ್ ಚಲೋ ನಡೆಸಲಾಗುವುದು. ಅದೇ ದಿನ 6ರಿಂದ 8ನೇ ತರಗತಿಗಳ ಪಾಠ ಬೋಧನೆ ಬಹಿಷ್ಕಾರ ಮಾಡಿ 1ರಿಂದ 5ನೇ ತರಗತಿಯವರೆಗೆ ಮಾತ್ರ ಪಾಠ ಬೋಧನೆ ಮಾಡಲು ತೀರ್ಮಾನಿಸಲಾಗುವುದು ಎಂದರು.ಈ ವೇಳೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ. ಶಿಡಗನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಚಳ್ಳಾರ ಸೇರಿದಂತೆ ಪದಾಧಿಕಾರಿಗಳು, ಶಿಕ್ಷಕರು ಇದ್ದರು.