ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

| Published : Jan 04 2024, 01:45 AM IST

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ನಾಲಾ ರೋಡ್ ಗಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಹನೂರು ತಾಲೂಕಿನ ನಾಲಾ ರೋಡ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ನಾಲ್ಕು ರಸ್ತೆಗಳನ್ನು ಬಂದ್ ಮಾಡುವ ಮೂಲಕ ವಿವಿಧ ಹಕ್ಕೂತ್ತಾಯಗಳಿಗಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ನಾಲಾ ರೋಡ್ ಗಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಹನೂರು ತಾಲೂಕಿನ ನಾಲಾ ರೋಡ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ನಾಲ್ಕು ರಸ್ತೆಗಳನ್ನು ಬಂದ್ ಮಾಡುವ ಮೂಲಕ ವಿವಿಧ ಹಕ್ಕೂತ್ತಾಯಗಳಿಗಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಹನೂರು ಪ್ರತ್ಯೇಕ ತಾಲೂಕಾಗಿ ಹಲವಾರು ವರ್ಷಗಳೇ ಕಳೆದರೂ ಇನ್ನೂ ಮೂಲಭೂತ ಸೌಲಭ್ಯಗಳಿಂದ ಬಹುತೇಕ ಗ್ರಾಮಗಳು ವಂಚಿತಗೊಂಡಿದೆ. ರಾಮಾಪುರ ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ಮಾರ್ಟಳ್ಳಿಯಿಂದ ಜಲ್ಲಿಪಾಳ್ಯ ಕೂಡ್ಲೂರು ಗ್ರಾಮಗಳವರೆಗೆ ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿ ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಗಡಿ ಗ್ರಾಮದಲ್ಲಿ ನಾಕಬಂದಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ವಿವಿಧ ಬೇಡಿಕೆಗಳು ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಮಾರ್ಟಳ್ಳಿ ಸರ್ವೇ ನಂಬರ್ 18ರಲ್ಲಿ 1700 ಎಕರೆ, ಕಿರಪತಿ ಗ್ರಾಮ ಅಂತೋನಿಯರ್ ಕೊಯಿಲ್ ಹಾಗೂ ಹೊಗ್ಯಂ ಸರ್ವೆ ನಂಬರ್ 239ರಲ್ಲಿ 2700ಎಕರೆ ಒಂದೇ ಆರ್ ಟಿ ಸಿ ಗಳಲ್ಲಿ ಬರುತ್ತಿದ್ದು ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತು ಬ್ಯಾಂಕ್ ಗಳಲ್ಲಿ ಪಡೆಯಲು ಆಗದೆ ರೈತನ ಸ್ಥಿತಿ ಚಿಂತಾ ಜನಕವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪೊಡಿ ಮುಕ್ತಗೊಳಿಸಿಲ್ಲ ಹಾಗೂ ರಾಮಪುರದಿಂದ ನಾಲರೋಡ್ ಮಾರ್ಗವಾಗಿ ಗರಿಕೆ ಖಂಡಿ ರಸ್ತೆ ಅಂತರಾಜ್ಯ ರಸ್ತೆಯಾಗಿದ್ದು ತೀರಾ ಹದಗೆಟ್ಟಿದೆ ಜೊತೆಗೆ ಈ ಭಾಗದ ಮಾರ್ಟಳ್ಳಿ ಹಾಗೂ ವಿವಿಧ ಗ್ರಾಮಗಳಲ್ಲಿ ರಸ್ತೆಗಳೆಲ್ಲ ಹಾಳಾಗಿ ಜನಸಾಮಾನ್ಯರಿಗೆ ಸಂಚರಿಸಲು ತೊಂದರೆ ಆಗಿದೆ ಎಂದು ಆರೋಪಿಸಿದರು.

ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿ:

ಅರಣ್ಯದಂಚಿನ ಭಾಗದಲ್ಲಿ ರೈತರು ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಗೊಳಿಸುತ್ತಿದೆ. ಇತ್ತೀಚೆಗೆ ಮಳೆ ಇಲ್ಲದೆ ನಮ್ಮ ಭಾಗದಲ್ಲಿ ಅರಣ್ಯದಿಂದ ಕಾಡುಪ್ರಾಣಿಗಳು ನಾಡಿಗೆ ಬಂದು ಜನಜಾನುವಾರುಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡು ಕೂಡಲೇ ಇಲಾಖೆ ಅಧಿಕಾರಿಗಳು ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಕೂಡ್ಲೂರು ಹಾಗೂ ಸುಲ್ವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಇರುವುದಿಲ್ಲ. ಅರಣ್ಯದಂಚಿನ ಗ್ರಾಮಗಳ ನಿವಾಸಿಗಳು ಚಿಕಿತ್ಸೆಗಾಗಿ ತುರ್ತು ಸಂದರ್ಭದಲ್ಲಿ ಹನೂರು ಹಾಗೂ ಕೊಳ್ಳೇಗಾಲಕ್ಕೆ ಹೋಗಬೇಕಾಗಿದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನಾಲಾರೋಡ್ ಗ್ರಾಮದಿಂದ ಜೆಲ್ಲಿ ಪಾಳ್ಯ ಗ್ರಾಮದವರೆಗೆ ನಿರಂತರ ವಿದ್ಯುತ್ ಜ್ಯೋತಿ ಕಾಮಗಾರಿ ಕಳಪೆಯಾಗಿದ್ದು, ಪರಿಕರಗಳು ಹಾಳಾಗಿ ಗುಣಮಟ್ಟ ವಿದ್ಯುತ್ ನೀಡುತ್ತಿಲ್ಲ. ಅರಣ್ಯದಂಚಿನ ಗ್ರಾಮಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಓದಲು ಬರೆಯಲು ಹಣತೆ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನಾಗರೀಕರಿಗೆ ಸಿಗುವ ಸೌಲಭ್ಯ ಮತ್ತು ಸವಲತ್ತುಗಳಿಗೆ ದಿನನಿತ್ಯ ಅಲೆಯುವಂತಾಗಿದೆ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಡಿವೈಎಸ್ಪಿ ಸಂಧಾನ ವಿಫಲ: ಪ್ರತಿಭಟನಾ ಸ್ಥಳಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಸೋಮೇಗೌಡ ಭೇಟಿ ಮಾಡಿ ಪ್ರತಿಭಟನಾಕಾರದ ಜೊತೆ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವದಾಗಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು. ಆದರೆ ಸಂಬಂಧ ಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಭರವಸೆ ನೀಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ರಸ್ತೆ ಮಧ್ಯದಲ್ಲಿಯೇ ರೈತರು ಊಟ ಮಾಡುವ ಮೂಲಕ ಪ್ರತಿಭಟಿಸಿದರು.ಕೊಳ್ಳೇಗಾಲ ಎಸಿ ಮಹೇಶ್ ಭೇಟಿ ಭರವಸೆ : ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಕೊಳ್ಳೇಗಾಲ ಎಸಿ ಮಹೇಶ್ ಭೇಟಿ ನೀಡಿ ಭರವಸೆ ನೀಡಿದರು ನಂತರ ಪ್ರತಿಭಟನೆ ಕೈಬಿಟ್ಟರು.ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರವಿ ನಾಯ್ಡು, ಬಸವರಾಜು, ಶಿವಲಿಂಗಪ್ಪ, ಚಂದ್ರು, ಕಣ್ಣಸ್ವಾಮಿ, ಕನಕ, ಮನೋಜಮ್ಮ, ರಾಜಮಣಿ, ಹುಚ್ಚಯ್ಯ, ವೀರಯ್ಯ, ಅರ್ಪಿತರಾಜ್, ಅಂತೋಣಿ, ಸ್ವಾಮಿ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.