ಗಂಗಾವತಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

| Published : Feb 09 2024, 01:50 AM IST

ಸಾರಾಂಶ

ಭಾರತ ಸಂವಿಧಾನದಂತೆ ದೇಶಾದ್ಯಂತ ಒಕ್ಕೂಟವಾದಿ ಸ್ವರೂಪ ಬಲಗೊಳಿಸಲು ಈಗ ಒಕ್ಕೂಟ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುವುದನ್ನು ಕೂಡಲೇ ನಿಲ್ಲಿಸಿ ರಾಜ್ಯಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ಗಂಗಾವತಿ: ಭಾರತದ ಒಕ್ಕೂಟವಾದಿ ಸ್ವರೂಪ ಬಲಗೊಳಿಸಲು ರಾಜ್ಯಗಳ ಮೇಲೆ ಒಕ್ಕೂಟ ಸರ್ಕಾರದ ಹಸ್ತಕ್ಷೇಪಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮುಖಂಡ ನಿರುಪಾದಿ ಬೆಣಕಲ್ ಮಾತನಾಡಿ, ಭಾರತ ಸಂವಿಧಾನದಂತೆ ದೇಶಾದ್ಯಂತ ಒಕ್ಕೂಟವಾದಿ ಸ್ವರೂಪ ಬಲಗೊಳಿಸಲು ಈಗ ಒಕ್ಕೂಟ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುವುದನ್ನು ಕೂಡಲೇ ನಿಲ್ಲಿಸಿ ರಾಜ್ಯಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.ರಾಜ್ಯಗಳು ತಮ್ಮ ತೆರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯುವಲ್ಲಿ ಒಕ್ಕೂಟ ಸರ್ಕಾರ ಅಡ್ಡಿಯಾಗಬಾರದು. ಕರ್ನಾಟಕಕ್ಕೆ ಬರಗಾಲದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಒಕ್ಕೂಟ ಸರ್ಕಾರ ತನ್ನ ಮನಸ್ಸಿಗೆ ತೋಚಿದಂತೆ ರಾಜ್ಯ ಸರ್ಕಾರಗಳು ಸಾಲ ಪಡೆಯುವಂತೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಕೇಂದ್ರ ಪ್ರಾಯೋಜಿತ ಯೋಜನೆಗಳ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಕ್ಕೂಟ ಸರ್ಕಾರದ ಮಧ್ಯ ಪ್ರವೇಶ ಮಾಡಬಾರದು. ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಒಕ್ಕೂಟ ಸರ್ಕಾರ ಇಡಿ, ಸಿಬಿಐ, ಆದಾಯ ತೆರಿಗೆ ವಿಭಾಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಚಂದ್ರಪ್ಪ ಹೊಸಕೇರಾ, ಶಿವಣ್ಣ ಬೆಣಕಲ್, ಮಂಜುನಾಥ ಡಗ್ಗಿ, ಜಿ.ಹುಲಿಗೆಮ್ಮ, ಶ್ರೀನಿವಾಸ ಹೊಸಳ್ಳಿ, ಬಾಳಪ್ಪ ಹುಲಿಹೈದರ್ ಇದ್ದರು.