ಮೈಸೂರು ಮಹಾ ನಗರ ಪಾಲಿಕೆ ಚುನಾವಣೆ ನಡೆಸಲು ಆಗ್ರಹಿಸಿ ಪ್ರತಿಭಟನೆ

| Published : Mar 06 2025, 12:31 AM IST

ಸಾರಾಂಶ

ಬೃಹತ್‌ ಮೈಸೂರು ನಗರ ಪಾಲಿಕೆ ಯೋಜನೆಯನ್ನು ನಿಧಾನವಾಗಿ ಜಾರಿಗೆ ತರಬಹುದು. ಆದರೆ, ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕು. ಚುನಾವಣೆ ವೇಳೆ ಸರ್ಕಾರಕ್ಕಿಂತ ಚುನಾವಣಾ ಆಯೋಗಕ್ಕೆ ಸರ್ವಾಧಿಕಾರ ನೀಡುವುದನ್ನು ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥ ಟಿ.ಎನ್‌. ಶೇಷನ್‌ ತೋರಿಸಿಕೊಟ್ಟಿದ್ದಾರೆ. ಮುಂದೆ ಬಂದವರು ಸರ್ಕಾರ ಕೈಗೊಂಬೆಯಾಗಿ ಕೆಲಸ ನಿರ್ವಹಿಸಿದ್ದು ವಿಪರ್ಯಾಸ ಸಂಗತಿ.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಡಬೇಕು. ನಗರ ಪಾಲಿಕೆ ಚುನಾವಣೆಯನ್ನು ಶೀಘ್ರವಾಗಿ ನಡೆಸಬೇಕು ಎಂದು ಆಗ್ರಹಿಸಿ ಮೈಸೂರು ನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ ಪದಾಧಿಕಾರಿಗಳು ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟಿಸಿದರು.

ನಗರ ಪಾಲಿಕೆಗೆ ಶೀರ್ಘದಲ್ಲೇ ಚುನಾವಣಾ ನಡೆಸಲು ನಮ್ಮ ಕ್ಷೇತ್ರದ ಸಮಾಜವಾದಿ, ಕಾನೂನು ಪಂಡಿತರು, ಅಂಬೇಡ್ಕರ್‌ ಪೂಜಿಸುವವರು, ಮೌಢ್ಯತೆ ನಿರಾಕರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗ ಸಂವಿಧಾನ ಬದ್ಧ ಅಧಿಕಾರ ನಡೆಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಬೃಹತ್‌ ಮೈಸೂರು ನಗರ ಪಾಲಿಕೆ ಯೋಜನೆಯನ್ನು ನಿಧಾನವಾಗಿ ಜಾರಿಗೆ ತರಬಹುದು. ಆದರೆ, ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕು. ಚುನಾವಣೆ ವೇಳೆ ಸರ್ಕಾರಕ್ಕಿಂತ ಚುನಾವಣಾ ಆಯೋಗಕ್ಕೆ ಸರ್ವಾಧಿಕಾರ ನೀಡುವುದನ್ನು ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥ ಟಿ.ಎನ್‌. ಶೇಷನ್‌ ತೋರಿಸಿಕೊಟ್ಟಿದ್ದಾರೆ. ಮುಂದೆ ಬಂದವರು ಸರ್ಕಾರ ಕೈಗೊಂಬೆಯಾಗಿ ಕೆಲಸ ನಿರ್ವಹಿಸಿದ್ದು ವಿಪರ್ಯಾಸ ಸಂಗತಿ. ಚುನಾವಣಾ ಆಯುಕ್ತರನ್ನು ರಾಜ್ಯಪಾಲರು ನೇಮಿಸುತ್ತಾರೆ. ಹುದ್ದೆಯ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಚುನಾವಣಾ ಆಯುಕ್ತರನ್ನು ಹೈ ಕೋರ್ಟ್‌ ನ್ಯಾಯಾಧೀಸರಿಗೆ ನಿರ್ದಿಷ್ಟಪಡಿಸಿದ ಆಧಾರದ ಮೇಲೆ ಮತ್ತು ವಿಧಾನವನ್ನು ಹೊರತುಪಡಿಸಿ ಕಚೇರಿಯಿಂದ ತೆಗೆದು ಹಾಕಲಾಗುವುದಿಲ್ಲ ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಚುನಾವಣೆಗಳು ಅವಧಿ ಮುಗಿಯುವುದರೊಳಗೆ ನಡೆಯುತ್ತದೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ಆಯೋಗದ ಅಧಿಕಾರದಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡದಿರಲು ಜನಾಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ. ಸರ್ಕಾರಗಳ ಸರ್ವಾಧಿಕಾರ ಧೋರಣೆಗೆ ಪ್ರಜೆಗಳ ತೀರ್ಪು ಅಂತಿಮ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯಲ್ಲಿ ಪ್ರೊ.ಪಿ.ವಿ.ನಂಜರಾಜ ಅರಸ್‌, ಪುಟ್ಟನಂಜಯ್ಯ ದೇವನೂರು, ಸತ್ಯಾನಂದ ವಿಟ್ಟು, ಕೆ.ಆರ್‌.ಎಸ್‌ ಪಕ್ಷದ ಪದಾಧಿಕಾರಿಗಳು ಇದ್ದರು.