ವಡ್ಡರಬಂಡೆ ರಾಜಕಾಲುವೆ ಶೀಘ್ರ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

| Published : Mar 11 2025, 12:51 AM IST

ವಡ್ಡರಬಂಡೆ ರಾಜಕಾಲುವೆ ಶೀಘ್ರ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಡ್ಡರಬಂಡೆಯ ರಾಜಕಾಲುವೆ ತುರ್ತಾಗಿ ದುರಸ್ತಿಗೊಳಿಸಬೇಕು, ಬೀದಿ ನಾಯಿ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ಇಲ್ಲಿನ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಡ್ಡರಬಂಡೆಯ ರಾಜಕಾಲುವೆ ತುರ್ತಾಗಿ ದುರಸ್ತಿಗೊಳಿಸಬೇಕು, ಬೀದಿ ನಾಯಿ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ಇಲ್ಲಿನ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.

ಬಳ್ಳಾರಿ ನಗರವು ಧೂಳುಮಯವಾಗಿದೆ. ಸೊಳ್ಳೆಗಳ ತಾಣವಾಗಿದೆ. ಬೀದಿನಾಯಿಗಳ ಹಾವಳಿಯಿಂದ ಆತಂಕದಲ್ಲಿಯೇ ಓಡಾಡುವಂತಾಗಿದೆ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾಳಜಿ ತೆಗೆದುಕೊಳ್ಳದ ಪಾಲಿಕೆ ನಿರ್ಲಕ್ಷ್ಯದಿಂದ ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸಂಚಾಲಕ ಆರ್.ಸೋಮಶೇಖರ ಗೌಡ ಮಾತನಾಡಿ, ನಗರಕ್ಕೆ ಶುದ್ಧ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ಚರಂಡಿ ನೀರು ಮಿಶ್ರಿತ ನೀರು ಪೂರೈಕೆಯಿಂದ ನಾನಾ ರೋಗಗಳು ಹರಡುತ್ತಿವೆ. ಭಾರೀ ವಾಹನಗಳ ಓಡಾಡಕ್ಕೆ ತಡೆಯಾಗಿಲ್ಲ. ದಿನದಿನಕ್ಕೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಎಲ್ಲಿಯೂ ಕಂಡು ಬರುತ್ತಿಲ್ಲ. ಹೀಗಾಗಿ ಎಲ್ಲಿ ನೋಡಿದರೂ ಅಡ್ಡಾದಿಡ್ಡಿಯಾಗಿ ವಾಹನಗಳ ಪಾರ್ಕಿಂಗ್ ಕಂಡು ಬರುತ್ತಿದೆ. ಪಾಲಿಕೆ ಆಡಳಿತ ಈ ಬಗ್ಗೆ ಗಮನ ಹರಿಸಬೇಕು. ಹೋರಾಟ ಸಮಿತಿಯ ಹಕ್ಕೊತ್ತಾಯಗಳ ಕುರಿತು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ನಿವೃತ್ತ ಉಪನ್ಯಾಸಕ ನರಸಣ್ಣ, ಹೋರಾಟ ಸಮಿತಿಯ ಡಾ. ಪ್ರಮೋದ್, ಶಾಂತಿ, ಈಶ್ವರಿ, ನಾಗರತ್ನ, ವಿದ್ಯಾ, ಉಮೇಶ್, ಅಂತೋನಿ, ಉಮಾ ಮಹೇಶ್, ಶ್ಯಾಮ್ ಸುಂದರ್, ನಿವೃತ್ತ ಮುಖ್ಯ ಎಂಜಿನಿಯರ್ ಉದ್ದಿಹಾಳ್ ಸೇರಿದಂತೆ ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಸಮಿತಿಯ ಪ್ರಮುಖರು ಮನವಿ ಸಲ್ಲಿಸಿದರು.