ಸಾರಾಂಶ
ಮೂಡುಬಿದಿರೆ ಆಡಳಿತ ಸೌಧದ ಎದುರು ಸೋಮವಾರ ಸಿಡಬ್ಯುಎಫ್‌ಐ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಕೆಂಪು ಕಲ್ಲು, ಮರಳು ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕೆಂಪು ಕಲ್ಲು ಮತ್ತು ಮರಳು ಸಿಗುವಂತೆ ಕರಾವಳಿಗೆ ಸೂಕ್ತ ನೀತಿ ಅಳವಡಿಸಬೇಕೆಂದು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಯುಎಫ್‌ಐ) ಮೂಡುಬಿದಿರೆ ತಾಲೂಕು ಸಮಿತಿ ಒತ್ತಾಯಿಸಿದೆ.ಮೂಡುಬಿದಿರೆ ಆಡಳಿತ ಸೌಧದ ಎದುರು ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಡಬ್ಯುಎಫ್‌ಐ ಜಿಲ್ಲಾಧ್ಯಕ್ಷ ವಸಂತ ಆಚಾರಿ,ಕೆಂಪು ಕಲ್ಲು, ಮರಳು ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದರಿಂದ ಕೆಂಪು ಗಣಿಗಾರಿಕೆ ಮತ್ತು ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಇವುಗಳಿಗೆ ಸಂಬಂಧಪಟ್ಟ ಮಾಫಿಯ, ದಂಧೆಗಳನ್ನು ತಡೆಯುವ ಬರದಲ್ಲಿ ಬಡ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಆರೋಪಿಸಿದರು.ಜನಪ್ರತಿನಿಧಿಗಳು, ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಫಿಯಗಳಲ್ಲಿ ಶಾಮೀಲು ಆಗುವುದರಿಂದ ಇಲ್ಲಿಯವರೆಗೆ ಸೂಕ್ತ ನಿಯಮಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ತುರ್ತುಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 1.26 ಲಕ್ಷ ಜನ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಅವರ ಜೀವನೋಪಾಯಕ್ಕೆ ಸರ್ಕಾರ ಕನಿಷ್ಠ 10 ಸಾವಿರ ರು. ಪರಿಹಾರಧನವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ, ಸಿಡಬ್ಯುಎಫ್ ತಾಲೂಕು ಕಾರ್ಯದರ್ಶಿ ಶಂಕರ್ ವಾಲ್ಪಾಡಿ, ಮುಖಂಡರಾದ ಕೃಷ್ಣಪ್ಪ ನಡಿಗುಡ್ಡೆ, ದಿವಾಕರ ಸುವರ್ಣ, ವಾಸುದೇವ ಆಚಾರಿ, ಗಿರಿಜಾ, ಲಕ್ಷ್ಮೀ ಮತ್ತಿತರರಿದ್ದರು.ಹಳೆ ಪೊಲೀಸ್ ಠಾಣೆಯಿಂದ ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.