ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

| Published : Jul 06 2025, 01:48 AM IST

ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಕರ್ನಾಟಕದ ಪಠ್ಯಕ್ರಮದಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ದ್ವಿತೀಯ ಭಾಷೆಯಾಗಿ ಇಂಗ್ಲಿಷನ್ನು ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಮಾತ್ರವಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ. ತೃತೀಯ ಭಾಷೆಯಾದ ಹಿಂದಿಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡವನ್ನು ಒಡ್ಡುತ್ತಿದೆ. 2024ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 90, 794 ವಿದ್ಯಾರ್ಥಿಗಳು ತೃತೀಯ ಭಾಷೆಯಾದ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. 2025ರಲ್ಲಿ ಈ ಸಂಖ್ಯೆ 1.2 ಲಕ್ಷಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿವೆ.

ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ. ಇದು ಹಿಂದಿಯ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದ್ದು ತ್ರಿಭಾಷಾ ನೀತಿಯಿಂದ ಕರ್ನಾಟಕಕ್ಕೆ ಯಾವ ಲಾಭವೂ ಇಲ್ಲ. ಇದರಿಂದ ಒಬ್ಬನೇ ಒಬ್ಬ ಕನ್ನಡಿನಿಗೂ ಉದ್ಯೋಗ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.

ತಮಿಳುನಾಡು 1968ರಿಂದಲೇ ತ್ರಿಭಾಷಾ ನೀತಿ ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ತ್ರಿಭಾಷಾ ನೀತಿ ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ರಾಜ್ಯಗಳು ತಮ್ಮ ಭಾಷಿಕ ಗುರುತನ್ನು ರಕ್ಷಿಸುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡಿವೆ. ಕರ್ನಾಟಕವು ಈ ಉದಾಹರಣೆಗಳಿಂದ ಸ್ಫೂರ್ತಿ ಪಡೆದು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷಾ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಅಂಗಡಿ ಶಂಕರ್ ಡಿ.ಕಗ್ಗಲ್, ಕೆ.ಎಂ. ಶಿವಕುಮಾರ್, ಕೊಳೂರು ಜಿ.ತಿಪ್ಪಾರೆಡ್ಡಿ, ರಾಜು, ಆನಂದಗೌಡ, ಸೋಮಶೇಖರ್, ಬಸವರಾಜ ತೆಕ್ಕಲಕೋಟೆ, ಗೆಣಿಕೆಹಾಳ್ ವಿರೇಶ್ ಹಾಗೂ ಶಿವರಾಮೇಗೌಡ ಬಣದ ಕರವೇ ಜಿಲ್ಲಾಧ್ಯಕ್ಷ ಜಿ.ರಾಜಶೇಖರ, ಉಪಾಧ್ಯಕ್ಷ ಕಟ್ಟಿಗೆ ಸುರೇಶ್, ಡೇವಿಡ್, ಮೃತ್ಯುಂಜಯ, ರಾಜು, ಮಂಜುನಾಥ ಸೇರಿ ಎರಡು ಬಣಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.