ಸಾರಾಂಶ
ಹಾವೇರಿ: ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗೊಳಿಸಲು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಆದಿಜಾಂಬವ ಸಂಘ ಹಾಗೂ ಇತರ ದಲಿತ ಸಂಘಗಳಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಸಮಾವೇಶಗೊಂಡು ಒಳಮೀಸಲಾತಿಗೆ ಒಕ್ಕೊರಲ ಆಗ್ರಹ ಮಾಡಿದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಸ್. ಮಾಳಗಿ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಪ್ರಕಾರ ಒಳ ಮೀಸಲಾತಿ ಕಲ್ಪಿಸಲು ಯಾವುದೇ ಮುಖ್ಯಮಂತ್ರಿ ಮುಂದಾಗಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಿ, ಸರ್ವಾನುಮತದಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು. ಈ ವರದಿಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೂಡ ಸಮ್ಮತಿ ನೀಡಿದೆ.ಆದ್ದರಿಂದ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಬೇಕಿದೆ. ಶತಮಾನಗಳಿಂದ ವಂಚಿತರಾಗಿರುವ ಮಾದಿಗ ಸಮಾಜಕ್ಕೆ ಈಗಲಾದರೂ ನ್ಯಾಯ ದೊರಕಿಸಿಕೊಡಿ. ಈ ವಿಷಯದ ಕುರಿತು ಸಿಎಂ ಮೌನ ವಹಿಸಿರುವುದು ಸರಿಯಲ್ಲ. ಅಹಿಂದ ಮುಖಂಡ, ನೊಂದವರ ಪರಿಪಾಲಕ ಎನ್ನುವ ಸಿಎಂ ಸಿದ್ದರಾಮಯ್ಯ ಕೂಡಲೇ ಈ ವರದಿ ಜಾರಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಆದಿಜಾಂಬವ ಸಂಘದ ಅಧ್ಯಕ್ಷ ನಾಗರಾಜ ಮಾಳಗಿ, ಉಡಚಪ್ಪ ಮಾಳಗಿ, ಅಶೋಕ ಮರೆಣ್ಣನವರ, ಸುಭಾಷ ಬೆಂಗಳೂರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಿ.ಕೆ. ಕರ್ಜಗಿ, ಮಲ್ಲಪ್ಪ ಕಡಕೋಳ, ಎಚ್.ಜಿ. ಹೊಸಮನಿ, ಆರ್.ವೈ.ರಾಣಿಬೆನ್ನೂರ ಇತರರು ಹಾಜರಿದ್ದರು.