ಎಸ್ಸಿ, ಎಸ್ಟಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

| Published : Oct 17 2024, 12:14 AM IST

ಸಾರಾಂಶ

ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಮತ್ತೆ ಇತರೆ ನೇಮಕಾತಿಗಳನ್ನು ರದ್ದು ಪಡಿಸಬೇಕು.

ಕಾರವಾರ: ಎಸ್ಸಿ, ಎಸ್ಟಿ ಒಳಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಒಳಮೀಸಲಾತಿ ವರ್ಗಿಕರಣದಿಂದ ಎಲ್ಲ ಜಾತಿಗಳಿಗೆ ಸಮಾನ ಅವಕಾಶ ಲಭಿಸುತ್ತದೆ. ಹಾಗಾಗಿ ಹೋರಾಟಗಳನ್ನೂ ಮನಗಂಡಿದ್ದ ಸರ್ಕಾರ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಿ ವರದಿ ನೀಡುವಂತೆ ೨೦೦೫ರಲ್ಲಿ ರಚಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಏಕ ಸದಸ್ಯ ಆಯೋಗವು ರಾಜ್ಯದಲ್ಲಿ ೧೦೧ ಎಸ್‌ಸಿ ಜಾತಿ ಸಮುದಾಯಗಳ ಕೌಟುಂಬಿಕ ಸಮೀಕ್ಷೆ ನಡೆಸಿ ಸಮಗ್ರ ಅಧ್ಯಯನದ ವರದಿಯನ್ನು ೨೦೧೨ರಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಸಾಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಮರೆಮಾಚಲು ಒಳಮೀಸಲಾತಿ ಜಾರಿಗೊಳಿಸುವ ಕಾನೂನಾತ್ಮಕ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಸದ್ಯ ಜಾತಿ ಜನಗಣತಿ ವರದಿ ಬಿಡುಗಡೆ ಚರ್ಚೆ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುತ್ತಿರುವುದು ಸಂವಿಧಾನಕ್ಕೆ ಅಪಚಾರವಾಗಿದೆ. ಈ ಜಾತಿ ಜನಗಣತಿ ವರದಿಗೂ ಎಸ್ಸಿ ಒಳಮೀಸಲಾತಿ ವರ್ಗಿಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಒಳಮೀಸಲಾತಿ ಜಾರಿಗಾಗಿ ಎಸ್ಸಿ ಎಸ್ಟಿ ಸಂಬಂಧಿಸಿದ ಮೂರು ಆಯೋಗಗಳ ವರದಿ ಅಂಕಿ ಸಂಖ್ಯೆ ಕಾನೂನುಬದ್ಧ ಕರಾರುವಕ್ಕಾದ ದತ್ತಾಂಶಗಳ ಸಮಗ್ರ ಮಾಹಿತಿಯು ಸರ್ಕಾರ ಬಳಿ ಇದೆ. ಇವುಗಳ ಆಧಾರದಲ್ಲಿ ಸದ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ವೋಚ್ಛ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠವು ನೀಡಿದ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಮತ್ತೆ ಇತರೆ ನೇಮಕಾತಿಗಳನ್ನು ರದ್ದು ಪಡಿಸಬೇಕು. ಜಾತಿ ಜನಗಣತಿ ವರದಿ ಮುನ್ನೆಲೆಗೆ ತಂದು ನ್ಯಾಯಾಲಯದ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುವ ಜಾತಿ ಜನಗಣತಿ ವರದಿಯನ್ನು ಕೈಬಿಟ್ಟು ಮೊದಲು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.