ಕನ್ನಡಪ್ರಭ ವಾರ್ತೆ ಜಮಖಂಡಿಎತ್ತುಗಳನ್ನು ಕಟ್ಟಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ನಂದಿ ಸೇನೆ ಸಂಯುಕ್ತಾಶ್ರಯದಲ್ಲಿ ಬುಧವಾರ ತಾಲೂಕಿನ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಎತ್ತುಗಳನ್ನು ಕಟ್ಟಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ನಂದಿ ಸೇನೆ ಸಂಯುಕ್ತಾಶ್ರಯದಲ್ಲಿ ಬುಧವಾರ ತಾಲೂಕಿನ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಜೋಡೆತ್ತುಗಳಿರುವ ಪ್ರತಿಯೊಬ್ಬ ರೈತರಿಗೆ ತಿಂಗಳಿಗೆ ₹11,000 ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದ ಅವರು, ನೂರಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ರೈತರು ಗಮನ ಸೆಳೆದರು.
ರೈತ ಮುಖಂಡ ಮಹೇಶ ದೇಶಪಾಂಡೆ ಮಾತನಾಡಿ, ರೈತನ ಮಿತ್ರ ಎನಿಸಿರುವ ಎತ್ತುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಅದನ್ನು ಪುನಶ್ಚೇತನ ಗೊಳಿಸಲು ಜೋಡಿತ್ತಿನ ಕೃಷಿಕರಿಗೆ ಪ್ರೋತ್ಸಾಹಿಸಲು ಆಗ್ರಹಿಸಿ ಎತ್ತುಗಳೊಂದಿಗೆ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು. ಇಂದು ಬೆರಳೆಣಿಕೆಯಷ್ಟು ರೈತರಲ್ಲಿ ಮಾತ್ರ ಎತ್ತುಗಳಿವೆ. ಎತ್ತುಗಳಿಂದ ಬಯೋಗ್ಯಾಸ್, ಗೊಬ್ಬರ ಸೇರಿ ಅನೇಕ ಸಂಪನ್ಮೂಲಗಳನ್ನು ತಯಾರಿಸಿಕೊಳ್ಳಬಹುದು ಎಂದರು.ತಾಲೂಕು ರೈತಸಂಘದ ಉಪಾಧ್ಯಕ್ಷ ಸಿದ್ದುಗೌಡ ಪಾಟೀಲ ಮಾತನಾಡಿ, ಎತ್ತುಗಳೊಂದಿಗೆ ಕೃಷಿ ಮಾಡುತ್ತಿರುವ ರೈತ ನಿಜವಾದ ನೇಗಿಲಯೋಗಿ ಆಗಿದ್ದಾನೆ. ಎತ್ತುಗಳನ್ನು ಬಿಟ್ಟು ಯಂತ್ರಗಳನ್ನು ಬಳಸುತ್ತಿರುವುದರಿಂದ ಭೂಮಿಯ ಇಂಗಾಲದ ಪ್ರಮಾಣ ಶೇ.10ರಿಂದ ಶೇ. 0.33ಕ್ಕೆಇಳಿಕೆಯಾಗಿದೆ. ಇದರಿಂದ ಪ್ರಕೃತಿ ವಿಕೋಪಗಳಾಗುತ್ತಿವೆ. ಎತ್ತುಗಳ ಅವಶ್ಯಕತೆಯ ಕುರಿತು ವಿಶ್ವವಿದ್ಯಾಲಯಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದು ಸರ್ಕಾರ ವರದಿ ತರಿಸಿಕೊಳ್ಳಬೇಕು ಎಂದರು. ಸಿದ್ದೇಶ್ವರ ಸ್ವಾಮಿಗಳ ಹೆಸರಿನಲ್ಲಿ ನಂದಿ ಸಂಸ್ಕೃತಿ ಪುನಶ್ವೇತನ ಕಾನೂನು ಜಾರಿಗೊಳಿಸಬೇಕು, ಬಜೆಟ್‌ನಲ್ಲಿ ಶೇ.10ರಷ್ಟು ಅನುದಾನ ಮೀಸಲಿಡಬೇಕು, ಜೋಡೆತ್ತಿನ ಕೃಷಿಕರಿಗೆ ಮಾಸಿಕ 11 ಸಾವಿರ ಪ್ರೋತ್ಸಾಹಧನ, ನಂದಿ ವಿದ್ಯುತ್, ಅಡುಗೆ ಎಣ್ಣೆ, ಗ್ಯಾಸ್, ಔಷಧ, ಗೊಬ್ಬರ, ಗುಣಮಟ್ಟದ ಆಹಾರಧಾನ್ಯ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಡಾ.ಅಜಯ ಕುಲಕರ್ಣಿ ಮಾತನಾಡಿ, ರಾಜ್ಯ ಸರ್ಕಾರ ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಜತೆಗೆ ಎತ್ತುಗಳೊಂದಿಗೆ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎತ್ತುಗಳ ರಕ್ಷಣೆಗೆ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.ಹಲವಾರು ವರ್ಷಗಳಿಂದ ಕೃಷಿಯಲ್ಲಿ ಎತ್ತುಗಳ ಮಹತ್ವದ ಕುರಿತು ತಿಳುವಳಿಕೆ ನೀಡುವ ಕೆಲಸ ನಡೆದಿದೆ. ಸರ್ಕಾರಗಳು ಅದನ್ನು ಪ್ರೋತ್ಸಾಹಿಸಿದರೆ ಸಾಂಪ್ರದಾ ಯಿಕ ಕೃಷಿಕರ ಸಂಖ್ಯೆ ಹೆಚ್ಚಾಗುತ್ತದೆ. ಮಾನವನ ಸಮೃದ್ಧ ಜೀವನಕ್ಕೆ ಪ್ರಾಣಿ,ಪಕ್ಷಿ, ಜಾನುವಾರುಗಳು ಅವಶ್ಯಕವಾಗಿದೆ. ಇದರಿಂದ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಯುಕ್ರೇನ್ ಯುದ್ಧದಿಂದಾಗಿ ಕೃಷಿ ಉಪಕರಣಗಳ ಆಮದು ಕಡಿಮೆಯಾಗಿದೆ. ಸರ್ಕಾರಿ ನೌಕರರು, ಶಾಸಕರು, ಮಾಜಿಗಳು, ಮಂತ್ರಿಗಳಿಗೆ ಗೌರವ ಧನ ಹೆಚ್ಚಿಸಿಕೊಳ್ಳುವಂತೆ ರೈತರಿಗೆ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹಿಸಲು ಮುಂದಾಗಬೇಕು ಎಂದರು.ಮುಖಂಡರಾದ ಶ್ರೀಶೈಲ ಮೈಗೂರ, ರಾಜು ನದಾಫ್ ಮಾತನಾಡಿದರು. ರೈತಸಂಘದ ಅಧ್ಯಕ್ಷ ಶ್ರೀಶೈಲ ಭೂಮಾರ, ಮುತ್ತಪ್ಪಕೊಮಾರ, ಬಾಹುಬಲಿ ನ್ಯಾಮಗೌಡ, ವಿಷ್ಣು ಕಂಕಣವಾಡಿ, ವಿಠಲ ಚೌಹಾಣ, ಬಿ.ಆರ್.ಶಿರಗುಪ್ಪಿ, ಜಿ,ಎಚ್.ಪಾಟೀಲ ಸೇರಿದಂತೆ ನೂರಾರು ಜರ ರೈತರು ಭಾಗಿಯಾಗಿದ್ದರು. ಸುಮಾರು ನೂರಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ರೈತರು ತಾಲುಕು ಕಚೇರಿಗೆ ಆಗಮಿಸಿದ್ದರು. ತಹಸೀಲ್ದಾರ ಅನೀಲ ಬಡಿಗೇರ ಮುಖಾಂತರ ಮನವಿ ಸಲ್ಲಿಸಲಾಯಿತು. ಪಿಎಸ್‌ಐ ಅನೀಲ ಕುಂಬಾರ ಹಾಗೂ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.