ದಾವಣಗೆರೆ: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಮತ್ತು ಉತ್ತರ ಕರ್ನಾಟಕ ಮಡಿವಾಳರ ಸಂಘಗಳ ನೇತೃತ್ವದಲ್ಲಿ ಮಾ.16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8ರಿಂದ ಚಿತ್ರದುರ್ಗದ ಮಾಚಿದೇವ ಗುರುಪೀಠದ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಶ್ರೀಕ್ಷೇತ್ರ ಕಾರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಮಡಿವಾಳ ಸಮಾಜ ಬಾಂಧವರು ಬೆಂಗಳೂರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮಡಿವಾಳ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಿಗಬೇಕಾದ ಸ್ಥಾನಮಾನ, ಮನ್ನಣೆ ಪಡೆಯಲು, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಹೋರಾಟ ನಡೆಯಲಿದೆ. ಗಂಗಾ ಕಲ್ಯಾಣ ಯೋಜನೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಜನ ಮಡಿವಾಳರಿಗೆ ನೀಡುವಂತೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು. ಸದ್ಯ ಪ್ರವರ್ಗ 2 ಎ ನಲ್ಲಿ ಮಡಿವಾಳರಿದ್ದು, ನಮ್ಮನ್ನು ಎಸ್‌ಸಿಗೆ ಸೇರ್ಪಡೆ ಮಾಡಬೇಕೆಂಬುದು ನಮ್ಮ ಒತ್ತಾಯ ಎಂದರು.

ಬೆಂಗಳೂರಿನ ಹೋರಾಟಕ್ಕೆ ಮಡಿವಾಳ ಸಮಾಜ ಬಾಂಧವರು ರೊಟ್ಟಿ ಬುತ್ತಿ ಸಮೇತರಾಗಿ ಬರಬೇಕು. ಬೆಂಗಳೂರು ಹೋರಾಟಕ್ಕೆ ಬರುವವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಬರಬೇಕು. ಹೋರಾಟಕ್ಕೆ ಬರುವವರು ಆಯಾ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ಆವರಗೆರೆ ಎಚ್.ಜಿ.ಉಮೇಶ ತಿಳಿಸಿದರು.

ಸಮಾಜದ ಮುಖಂಡರಾದ ಆರ್.ಎನ್. ಧನಂಜಯ, ಸುರೇಶ ಎಂ.ಕೋಗುಂಡೆ, ಡೈಮಂಡ್ ಮಂಜುನಾಥ, ಪಿ.ಮಂಜುನಾಥ, ಜಿ.ವಿಜಯಕುಮಾರ್, ನಿಟುವಳ್ಳಿ ಅಂಜಿನಪ್ಪ ಪೂಜಾರ ಇತರರು ಇದ್ದರು.


- - -

-10ಕೆಡಿವಿಜಿ4.ಜೆಪಿಜಿ: