ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯುವಕರು ದೇಶದ ಶಕ್ತಿ, ಸಂಪತ್ತು ಮತ್ತು ಭವಿಷ್ಯ. ಆದ್ದರಿಂದ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಜನತೆಯಲ್ಲಿ ಸ್ಪಷ್ಟ ಅರಿವು ಇರಬೇಕು ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವುಯಾದವ್ ಹೇಳಿದರು.ನಗರದ ಡಾನ್ ಬೋಸ್ಕೋ ಪದವಿ ಕಾಲೇಜು ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ದಾವಣಗೆರೆ ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಯುವ ಸಂಸತ್ ಸ್ಪರ್ಧೆಯಲ್ಲಿ ‘ತುರ್ತು ಪರಿಸ್ಥಿತಿಗೆ 50 ವರ್ಷ, ಭಾರತೀಯ ಪ್ರಜಾಪ್ರಭುತ್ವಕ್ಕೆ ಪಾಠಗಳು’ ಕುರಿತ ಅಣಕು ಸಂಸತ್ ಮಾದರಿಯ ಪರ- ವಿರೋಧ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ ಬಹುಪಾಲು ಯುವಕರಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡಲು ಯುವಕರ ಚಿಂತನೆಗಳು ಸಕಾರಾತ್ಮವಾಗಿರಬೇಕು. ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.
ವಿಕಸಿತ ಭಾರತದ ಪರಿಕಲ್ಪನೆ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಮಾತ್ರವಲ್ಲದೆ ಸಮಾನತೆ, ಸ್ವಚ್ಛತೆ, ಶಾಂತಿ, ವೈಜ್ಞಾನಿಕ ಮನೋಭಾವನೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಬೇಕು. ಯುವಕರು ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸತ್ಯ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು.ನಮ್ಮ ಜೀವನದಲ್ಲಿ ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜ್ಞಾನ, ಕೌಶಲ ಮತ್ತು ನೈತಿಕ ಮೌಲ್ಯಗಳನ್ನು ಯಾವ ರೀತಿ ವೃದ್ಧಿಸಿಕೊಳ್ಳುವ ಮೂಲಕ ಯುವಕರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.ಡಾನ್ ಬೋಸ್ಕೋ ಪದವಿ ಕಾಲೇಜು ಪ್ರಾಂಶುಪಾಲ ಫಾ.ಬೆನ್ನಿ ಕ್ರಿಸ್ತುದಾಸ್ ಮಾತನಾಡಿ, ವಿಶ್ವದಲ್ಲೇ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಯುವಶಕ್ತಿ ಸಕಾರಾತ್ಮಕವಾಗಿ ಬಳಕೆಯಾಗಬೇಕು. ಯುವಜನತೆ ಸಾಮಾಜಿಕ ಹಾಗೂ ರಾಜಕೀಯ ಅರಿವು ಬೆಳೆಸಿಕೊಳ್ಳಬೇಕು ಎಂದರು.
ಆಡಳಿತಾಧಿಕಾರಿ ಫಾ.ಫೆಲಿಕ್ಸ್ ಸೆರೋವೋ ಮಾತನಾಡಿ, ಇದು ಕೇವಲ ಸ್ಪರ್ಧೆಯಲ್ಲ. ನಿಮ್ಮೊಳಗಿನ ನಾಯಕತ್ವವನ್ನು ಹೊರತರುವ ಒಂದು ವೇದಿಕೆ. ದೇಶದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಅರಿಯಲು ಮತ್ತು ಸಂಸತ್ತಿನ ಕಾರ್ಯವಿಧಾನ ತಿಳಿಯಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳಬೇಕು ಹೇಳಿದರು.
ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎನ್.ಧನಕೋಟಿ ಮಾತನಾಡಿ, ಯುವಜನತೆಯ ಆಲೋಚನೆಗಳು ಆಧುನಿಕವಾಗುವುದರ ಜೊತೆಗೆ ಮಾನವೀಯ ಮೌಲ್ಯಗಳು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದಾಗ ಮಾತ್ರ ನಿಜವಾದ ‘ವಿಕಸಿತ ಭಾರತ’ ನಿರ್ಮಾಣವಾಗುತ್ತದೆ. ಯುವಶಕ್ತಿ ದೇಶದ ಸಾಮರ್ಥ್ಯ ಹಾಗೂ ಆಸ್ತಿಯಾಗಿದ್ದು ಸದ್ಬಳಕೆಯಾಗಬೇಕು. ಭವಿಷ್ಯದ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದ್ದು ಸಮರ್ಥವಾಗಿ ನಿಭಾಯಿಸಬೇಕು.
ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಾನ್ ಬೋಸ್ಕೋ ಪದವಿ ಕಾಲೇಜಿನ ವೈಷ್ಣವಿ, ನಿಧಿಶ್ರೀ, ಎಸ್‌ಜೆಎಂ ಕಾನೂನು ಕಾಲೇಜಿನ ಆದಿ, ಝೇವಿಬಾ, ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುದಾಸಿರಾ ರಾಜ್ಯಮಟ್ಟಕ್ಕೆ ಆಯ್ಕೆಯಾದರು.