ಸಾರಾಂಶ
ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಯುನಿಯನ್(ಎಚ್.ಕೆ. ರಾಮಚಂದ್ರಪ್ಪ ಬೆಂಬಲಿತ) ಜಿಲ್ಲಾ ಘಟಕದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ನಂತರ ತಾಪಂ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿಯ ಆಪ್ತ ಸಹಾಯಕರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಜಿಟಿ ಜಿಟಿ ಮಳೆಯಲ್ಲಿಯೇ ಛತ್ರಿ ಹಿಡಿದು ನಗರದ ಮುರುಘರಾಜೇಂದ್ರ ಮಠದ ಆವರಣದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತೆಯರು, ಕಾಗಿನೆಲೆ ವೃತ್ತ, ಪಿ.ಬಿ. ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ತಾಪಂ ಕಚೇರಿಯನ್ನು ತಲುಪಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಗಳನ್ನು ಈಡೇರಿಸದ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನೇತೃತ್ವ ವಹಿಸಿದ್ದ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮುಖ ಗುರುತಿಸುವಿಕೆ ವ್ಯವಸ್ಥೆ ಆನ್‌ಲೈನ್‌ನಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ಸರಿಪಡಿಸಬೇಕು. ಮಕ್ಕಳಿಗೆ ಮತ್ತು ಫಲಾನುಭವಿಗಳಿಗೆ ವಿತರಿಸುವ ಮೊಟ್ಟೆ ಬಿಲ್ ವೇತನ ವಿಳಂಬವಾಗುತ್ತಿರುವುದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ₹4,500 ಮತ್ತು ರಾಜ್ಯ ಸರ್ಕಾರ ₹8 ಸಾವಿರ ಮಾಸಿಕ ಸಂಭಾವನೆ ಕೊಡುತ್ತಿದೆ. ಹಾಗೆಯೇ ಕೇಂದ್ರ ಸರ್ಕಾರ ಅಂಗನವಾಡಿ ಸಹಾಯಕಿಯರಿಗೆ ₹2,250 ಮತ್ತು ರಾಜ್ಯ ಸರ್ಕಾರ ₹5,250 ನೀಡುತ್ತಿದೆ. ಕಳೆದ 15 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರ ಗೌರವಧನ ಸಂಭಾವನೆ ಹೆಚ್ಚಳ ಮಾಡಿಲ್ಲ. ಕೂಡಲೇ ಗೌರವಧನ ಹೆಚ್ಚಿಸಬೇಕೆಂದು ಆಗ್ರಹಿಸಿದರು.ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ ಹಾಗೂ ಹುಳುಗಳು ಬರುತ್ತಿವೆ. ಆಹಾರದಲ್ಲಿ ಪೌಷ್ಟಿಕಾಂಶದ ಪ್ರಮಾಣ ತೀವ್ರ ಕಡಿಮೆ ಇದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಆದ್ದರಿಂದ ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಗುಣಮಟ್ಟದ ಆಹಾರ ಪೂರೈಕೆಗೆ ಸರ್ಕಾರ ಮುಂದಾಗಬೇಕು. ಜತೆಗೆ ಗ್ರಾಚ್ಯುಟಿ ಪಡೆಯಲು ಅರ್ಹರಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ನಿವೃತ್ತಿಯಾಗಿರುವ ಕಾರ್ಯಕರ್ತೆಯರಿಗೂ ಅನ್ವಯಿಸುವಂತೆ ಗ್ರಾಚ್ಯುಟಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ರಾಜ್ಯ ಸಂಚಾಲಕ ಜಿ.ಡಿ. ಪೂಜಾರ, ಮಹಿಳಾ ಜಿಲ್ಲಾಧ್ಯಕ್ಷೆ ಪಾರ್ವತಿ ಪಾಟೀಲ, ಜ್ಯೋತಿ ಕುಲಕರ್ಣಿ, ವಿಶಾಲಾಕ್ಷಮ್ಮ ಹಿರೇಮಠ, ಯಲ್ಲಮ್ಮ ಮರಡೂರ, ಜಯಶ್ರೀ ಲೋಕನಗೌಡ್ರ, ಲೀಲಾವತಿ ಕುಂದಗೋಳ, ಶಿವಲೀಲಾ ಪಾಟೀಲ, ಜಿ.ಪಿ. ಯರೇಶಿಮಿ, ನಾಗರತ್ನಮ್ಮ ರೆಡ್ಡೇರ, ಉಮಾ ಮನ್ವಾಚಾರಿ, ಸೌಭಾಗ್ಯ ಎಚ್.ಆರ್. ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.