ನಗರದ ಅರಳೀಕಟ್ಟೆ ವೃತ್ತದ ಬಳಿಯ ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ಸೌಲಭ್ಯಗಳು ತಲುಪುವಂತೆ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಸಂಚಾರಿ ಕ್ಲಿನಿಕ್, ಗುಣಮಟ್ಟವಿಲ್ಲದ ಸೇಫ್ಟಿ ಕಿಟ್ ಹಾಗೂ ಟೂಲ್ಸ್ ಕಿಟ್ ವಿತರಣೆಯನ್ನು ಸ್ಥಗಿತಗೊಳಿಸಿ, ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸನ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಾಯಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.ನಗರದ ಅರಳೀಕಟ್ಟೆ ವೃತ್ತದ ಬಳಿಯ ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಎಚ್.ಟಿ. ರಾಮೇಗೌಡ ಮಾತನಾಡಿ, ೩೬ ನೋಂದಾಯಿತ ಸಂಘಟನೆಗಳನ್ನು ಒಳಗೊಂಡ ಒಕ್ಕೂಟವು ಕಳೆದ ನಾಲ್ಕು ದಶಕಗಳಿಂದ ಕಟ್ಟಡ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ. ಹಾಸನ ಜಿಲ್ಲೆಯಲ್ಲಿ ಈ ಹಿಂದೆ ೧.೩೬ ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದು, ಪರಿಶೀಲನೆ ಬಳಿಕ ಪ್ರಸ್ತುತ ೩೧,೧೪೦ ನೈಜ ಕಾರ್ಮಿಕರು ಮಾತ್ರ ಚಾಲ್ತಿಯಲ್ಲಿದ್ದಾರೆ. ಕಾರ್ಮಿಕರ ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳ ಅರ್ಜಿ ವಿಲೇವಾರಿಯಲ್ಲಿ ತಾಂತ್ರಿಕ ದೋಷ ಮತ್ತು ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯವನ್ನು ಹೆಚ್ಚಿಸಬೇಕು. ವೈದ್ಯಕೀಯ ನೆರವನ್ನು ₹೨ ಲಕ್ಷ ಗಳಿಂದ ₹೫ ಲಕ್ಷಗಳಿಗೆ ಏರಿಸಬೇಕು. ವೃದ್ಧಾಪ್ಯ ವೇತನವನ್ನು ₹೩,೦೦೦ ಗಳಿಂದ ₹೫,೦೦೦ ಗಳಿಗೆ ಹೆಚ್ಚಿಸಬೇಕು. ಸ್ವಾಭಾವಿಕ ಮರಣ ಹಾಗೂ ಅಂತ್ಯಕ್ರಿಯೆ ನೆರವನ್ನು ₹೧.೫೦ ಲಕ್ಷ ಗಳಿಂದ ₹೫ ಲಕ್ಷ ಗಳಿಗೆ ಏರಿಸಬೇಕು. ಖಾಸಗಿ ಶಾಲಾ- ಕಾಲೇಜುಗಳಲ್ಲಿ ಓದುತ್ತಿರುವ ಕಾರ್ಮಿಕರ ಮಕ್ಕಳಿಗೂ ಶೈಕ್ಷಣಿಕ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ನವೀಕರಣ ಶುಲ್ಕ ಹೆಚ್ಚಳದಿಂದ ಕಾರ್ಮಿಕರಿಗೆ ಹೊರೆಯಾಗುತ್ತಿದ್ದು, ಎರಡು ಬಾರಿ ಶುಲ್ಕ ಪಾವತಿಸುವ ಸಮಸ್ಯೆಯನ್ನು ಪರಿಹರಿಸಬೇಕು. ತಿರಸ್ಕೃತ ಅರ್ಜಿಗಳ ಮೇಲ್ಮನವಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಕಾರ್ಮಿಕ ಅದಾಲತ್ತು ಹಾಗೂ ಕಾನೂನು ಅರಿವು ಕಾರ್ಯಕ್ರಮಗಳನ್ನು ಪುನರಾರಂಭಿಸಬೇಕು. ಕಾರ್ಮಿಕರ ಕುಂದುಕೊರತೆ ಆಲಿಸಲು ಕಳೆದ ಐದು ತಿಂಗಳಿಂದ ಖಾಲಿಯಿರುವ ಹಾಸನ ಜಿಲ್ಲಾ ಕಾರ್ಮಿಕ ಅಧಿಕಾರಿ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ನೋಂದಾಯಿತ ಸಂಘಟನೆಗಳು, ಕಾರ್ಮಿಕ ನಿರೀಕ್ಷಕರು ಹಾಗೂ ಕಾರ್ಮಿಕ ಸೇವಾ ಕೇಂದ್ರದ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹಾಸನ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಾಯಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಎಚ್.ವೈ. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ. ಶಿವಪ್ರಸಾದ್, ಖಜಾಂಚಿ ಯು.ಜೆ. ಯೋಗೀಶ್, ಉಪಾಧ್ಯಕ್ಷ ಎಚ್.ಆರ್. ಮಂಜೇಗೌಡ, ಕೃಷ್ಣ ಎಚ್.ಎನ್. , ಅಹಮದ್ ಆಲಿ ಖಾನ್, ಬಾಬು, ಬಾಲಸುಬ್ರಮಣ್ಯ, ಗಣೇಶ್, ಚಂದ್ರ, ಸುರೇಶ್, ಸಿ.ಆರ್. ಗಿರೀಶ್, ನಾಗೇಶ್, ಸುರೇಶ್ ಇತರರು ಉಪಸ್ಥಿತರಿದ್ದರು.