ಹೊಸ ನಿವೇಶನ ಹಂಚಿಕೆ ತಾರತಮ್ಯ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

| Published : May 19 2025, 12:08 AM IST

ಸಾರಾಂಶ

ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಚಂಡೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗ್ರಾಮಸಭೆ ಕರೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿತ್ತು.

ಕುಕನೂರು: ತಾಲೂಕಿನ ಶಿರೂರು ಗ್ರಾಪಂ ವ್ಯಾಪ್ತಿಯ ಚಂಡೂರು ಗ್ರಾಮದಲ್ಲಿ ಹೊಸ ನಿವೇಶನ ಹಂಚಿಕೆಯಲ್ಲಿ ಹಲವು ತಾರತಮ್ಯ ನಡೆದಿದ್ದು, ಇದರ ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಶಿರೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

ಶಿರೂರು ಗ್ರಾಪಂ ವ್ಯಾಪ್ತಿಯ ಚಂಡೂರು ಗ್ರಾಮದ ಸರ್ವೆ ನಂ. ೬/೬, ೬/೭ಕ್ಕೆ ಸಂಬಂಧಿಸಿದ ನಿವೇಶನಗಳಿಗೆ ಯಾವುದೇ ಗ್ರಾಮ ಸಭೆ ನಡೆಸದೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಅಧ್ಯಕ್ಷರು ಹಾಗೂ ಸದಸ್ಯರ ಒಪ್ಪಿಗೆಯ ಮೇರೆಗೆ ಪರಿಶೀಲನೆ ಮಾಡಿಲ್ಲ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಚಂಡೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗ್ರಾಮಸಭೆ ಕರೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಯಾವುದೇ ಸಭೆ ಕರೆಯದೇ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಸಾಕಷ್ಟು ಬಡ ಫಲಾನುಭವಿ ತೊಂದರೆ ಅನುಭವಿಸಬೇಕಾಗಿದೆ. ಶಿರೂರು ಗ್ರಾಪಂಗೆ ಸೇರಿದ ಚಂಡೂರು ಗ್ರಾಮದಲ್ಲಿ ೧೪೩ ಆಶ್ರಯ ನಿವೇಶನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಉಳ್ಳವರಿಗೆ ಮತ್ತು ಹೆಚ್ಚು ಹಣ ಕೊಟ್ಟವರಿಗೆ ನಿವೇಶನ ಕೊಟ್ಟಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದವರಿಗೆ ಮೂರು ನಾಲ್ಕು ನಿವೇಶನ ಕೊಟ್ಟಿದ್ದಾರೆ. ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓ ಸೇರಿದಂತೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿದ್ದು ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ರಮೇಶ ಹಾಲವರ್ತಿ, ಮಂಜುನಾಥ ಸಂಕೀನ್, ಹುಚ್ಚಪ್ಪ ಹಂದ್ರಾಳ, ರವಿಗೌಡ ಪಾಟೀಲ್, ಮಾರುತಿ ದೊಡ್ಡಮನಿ, ಹನುಮಪ್ಪ ತಳಬಾಳ, ಈರಣ್ಣ ಶಂಕಿನ, ಸಂಗಪ್ಪ ಸಂಕಿನ, ನಿಂಗಪ್ಪ ಕುರಿ ಇತರರಿದ್ದರು.

ಹೊಸ ನಿವೇಶನ ನೀಡುವ ಕುರಿತು ಶಿರೂರು ಗ್ರಾಮ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಕುರಿತು ಸಭೆ ನಡೆಸಲಾಗಿದೆ. ಚಂಡೂರು ಗ್ರಾಮದ ಮತದಾರರ ಪಟ್ಟಿಯಲ್ಲಿ ಇರುವ ೧೨೭ ಜನರು ಹಾಗೂ ಇತರೆ ಗ್ರಾಮದ ಸಾರ್ವಜನಿಕರು ಆಗಮಿಸಿದ ಬಳಿಕ ಸಭೆ ನಡೆಸಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಶಿರೂರು ಗ್ರಾಪಂ ಪಿಡಿಓ ಶೇಖಸಾಬ್ ಪಿ.ಎಸ್ ಹೇಳಿದರು.