ಮಧುಗಿರಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತೀವ್ರವಾಗಿ ಖಂಡಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ ಮಿಡಿಗೇಶಿ ಹೋಬಳಿ ಕಸಾಪುರದಲ್ಲಿ ಭಾನುವಾರ ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನೆ ವೇಳೆ ಇಬ್ಬರು ಯುವಕರ ನಡುವೆ ನಡೆದ ಜಗಳದಲ್ಲಿ ಸಿಂಹಾದ್ರಿ ಎಂಬ ದಲಿತ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಸೋಮವಾರ ದಲಿತ ಸಂಘಟನೆಗಳು ಮಧುಗಿರಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತೀವ್ರವಾಗಿ ಖಂಡಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಂಎಲ್ಸಿ ಆರ್.ರಾಜೇಂದ್ರ ತಾಲೂಕಿನಲ್ಲಿ ಎಲ್ಲರೂ ಅಣ್ಣ ತಮ್ಮಂದಿರ ರೀತಿ ಬದುಕುತ್ತಿದ್ದು, ಯಾವುದೋ ಒಂದು ಘಟನೆಗೆ ಇಡೀ ಸಮಾಜ ಹೊಣೆಯಾಗಬಾರದು. ಮುಂದೆ ಇಂತಹ ಘಟನೆ ನಡೆಯದಂತೆ ನಾವೆಲ್ಲ ಎಚ್ಚರ ವಹಿಸೋಣ. ಈ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಉಳಿದಂತೆ ಬೇರೆಯವರು ಇದ್ದರೂ ತನಿಖೆ ಮಾಡಿ ಕ್ರಮವಹಿಸಲು ಸೂಚಿಸಿದ್ದೇನೆ ಎಂದರು.ಜಿ.ಪಂ ಮಾಜಿ ಅಧ್ಯಕ್ಷ ವೈ.ಎನ್.ಹುಚ್ಚಯ್ಯ ಮಾತನಾಡಿ, ಗಣೇಶೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಕಡಿಮೆಯಿತ್ತು. ಮೂರು ಬಾರಿ ತಾಲೂಕಿನಲ್ಲಿ ಮಾದಿಗ ಸಮಾಜದ ಯುವಕರು ಕೊಲೆಗೀಡಾಗಿರುವುದು ದುರಂತ. ನಾವು ಕುರಿ ಕೋಳಿಗಳಂತಾಗಿದ್ದೇವಾ ಎಂದು ಪ್ರಶ್ನಿಸಿದರು. ಘಟನೆಯಲ್ಲಿ ಸಿಂಹಾದ್ರಿಯ ಜೀವ ಉಳಿಸಬಹುದಾಗಿತ್ತು. ಆದರೆ ನಿರ್ಲಕ್ಷ್ಯದಿಂದ ಹಾಗೂ ಹಲವರ ಕುಮ್ಮಕ್ಕಿನಿಂದ ಈ ಕೊಲೆ ನಡೆದಿರಬಹುದು.ಇದರ ಹಿಂದಿರುವವರ ಮೇಲೆ ಪೊಲೀಸರು ಕ್ರಮವಹಿಸಬೇಕು. ಕುಟುಂಬಕ್ಕೆ 50 ಲಕ್ಷ ಪರಿಹಾರದ ಜೊತೆ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ ಮಾದಿಗ ಸಮಜದ ಯುವಕನ ಕೊಲೆಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ಕಲ್ಪಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾಮಟ್ಟದ ನೂರಾರು ದಲಿತ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.