ಸಾರಾಂಶ
ಹಾವೇರಿ: ಮಾಸಿಕ ಕನಿಷ್ಠ ₹36 ಸಾವಿರ ವೇತನ ಜಾರಿ ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶವ್ಯಾಪಿ ಬಂದ್‌ಗೆ ಕರೆ ನೀಡಿದ್ದ ಕಾರ್ಮಿಕರ ಹೋರಾಟ ಬುಧವಾರ ಪ್ರತಿಭಟನೆಗೆ ಸೀಮಿತವಾಗಿತ್ತು. ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ.ಇಲ್ಲಿನ ಮುರುಘರಾಜೇಂದ್ರ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಡಿವೈಎಫ್‌ಐ ಮುಖಂಡ ಬಸವರಾಜ ಪೂಜಾರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಘನತೆಯ ಬದುಕನ್ನು ವಿನಾಶಗೊಳಿಸುತ್ತವೆ. ಇವುಗಳನ್ನು ರದ್ದುಪಡಿಸಬೇಕು ಹಾಗೂ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಮಾಸಿಕ ₹36 ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಕಾರ್ಮಿಕರ ಬದುಕಿಗೆ ಅನುಕೂಲಕರವಾಗಿದ್ದ 29 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಅಂಗೀಕರಿಸುವ ಮೂಲಕ ಕಾರ್ಮಿಕರನ್ನು ಹೊಸ ಗುಲಾಮಗಿರಿಗೆ ತಳ್ಳುತ್ತಿದೆ. ಈ ನಾಲ್ಕು ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಜೀವಿಸುವ ಹಕ್ಕು, ಮೂಲಭೂತ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಪ್ರತಿಭಟನೆ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ- ಕಾರ್ಮಿಕ ಸಂಬಂಧ, ವೇತನ ಚೌಕಾಶಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲಿವೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭವನ್ನು ಗಳಿಸಲು ದಾರಿ ನಿರ್ಮಿಸಿ, ಕಾರ್ಮಿಕರ ಪಾಲಿಗೆ ಮರಣಶಾಸನಗಳಾಗುತ್ತವೆ ಎಂದು ದೂರಿದರು.ಸಿಐಟಿಯು ಜಿಲ್ಲಾ ಸಂಚಾಲಕ ಅಂದಾನೆಪ್ಪ ಹೆಬಸೂರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಾಸ್ಟೆಲ್, ವಸತಿ ಶಾಲೆ, ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರಗುತ್ತಿಗೆ ಮುಂತಾದ ಖಾಯಮೇತರ ನೌಕರರು, ಸ್ವಚ್ಛವಾಹಿನಿ ನೌಕರರು, ಸ್ಕೀಂ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರನ್ನು ಕಾಯಂಗೊಳಿಸಲು ಶಾಸನ ರೂಪಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಜಗದೀಶ ಕೋಟಿ, ಬಸವರಾಜ ಎಸ್., ಚೈತ್ರಾ ಎಸ್.ಕೆ., ಪ್ರಕಾಶ ದೇವರಗುಡ್ಡ, ಶಾಂತಾ ಗಡ್ಡಿ, ಹಿರಿಯ ಹೋರಾಟಗಾರ ರುದ್ರಪ್ಪ ಜಾಬೀನ, ಹಬೀಬ್ ಮುಲ್ಲಾ ಮಾತನಾಡಿದರು.ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ಜಿಲ್ಲಾ ಮುಖಂಡರಾದ ನಾರಾಯಣ ಕಾಳೆ, ಸುಭಾಸ್ ಸೊಟ್ಟೆಪ್ಪನವರ, ಚನವೀರಯ್ಯ ಹಿರೇಮಠ, ರಿಯಾಜ್ ಅಹ್ಮದ್ ಮರಪಾಜೆ, ಹುಸೇನಸಾಬ್ ಏರಿಮನಿ, ಈರಪ್ಪ ವಡ್ಡರ, ರಿಯಾಸ್ ಕೋಟೆನವರ, ಸಾಬೀರ ಕಡಕೋಳ, ಹನುಮಂತಪ್ಪ ಗೊರವರ, ಗುಡ್ಡಪ್ಪ ಗಾಜಿ, ಫಕ್ಕಿರೇಶ ಹಕ್ಕಿಮರೆಣ್ಣನವರ, ರೇಣುಕಮ್ಮ ಕಸವಾಡ, ನಾಗಮ್ಮ ಒಣರೊಟ್ಟಿ, ಮಂಜುಳಾ ಹಾನಗಲ್, ಮಂಜುಳಾ ತಡಸ ಜಯಮ್ಮ ಬೆಳವಿಗಿ, ದೀಪಾ ಛಲವಾದಿ, ಜ್ಯೋತಿ ಮಾಸೂರು, ನೇತ್ರಾ ಹರಿಜನ, ಲಕ್ಷ್ಮೀ ತಳವಾರ, ಆದಂ ದೇವಿಹೊಸೂರು, ಜಾಫರಸಾಬ ಮನ್ನಂಗಿ, ಎಚ್.ಎಚ್. ನದಾಫ, ಶಿವರಾಜ ಹಿತ್ಲರ್, ಸುನೀಲಕುಮಾರ್ ಎಲ್, ಅರುಣ ನಾಗವಂದ, ಸುನೀತಾ ಬಾಡನಾಯ್ಕ, ಶೋಭಾ ಡೊಳ್ಳೆಶ್ವರ, ಆರ್ ಶ್ರೀಕೃಷ್ಣ ಚೈತನ್ಯ, ಸಿ. ರಾಜಶೇಖರ್, ಲಲಿತಾ ಹರಿಜನ, ಪವಿತ್ರಾ ಮಾಳಗಿ ವಹಿಸಿದ್ದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳಿಂದ ಎರಡು ನೂರಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.