ಸಾರಾಂಶ
ಹಂಪಿ ಕನ್ನಡ ವಿಶ್ವವಿದ್ಯಾಲಯದ ೪೮ ಹೊರಗುತ್ತಿಗೆ ನೌಕರರಿಗೆ ಕಳೆದ ೧೧ ತಿಂಗಳಿಂದ ವೇತನ ಪಾವತಿ ಮಾಡದಿರುವುದನ್ನು ವಿರೋಧಿಸಿ ದಲಿತ ಹಕ್ಕು ಸಮಿತಿಯಿಂದ ಮಂಗಳವಾರ ವಿವಿಯ ಆಡಳಿತ ವಿಭಾಗದ ಬಳಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ೪೮ ಹೊರಗುತ್ತಿಗೆ ನೌಕರರಿಗೆ ಕಳೆದ ೧೧ ತಿಂಗಳಿಂದ ವೇತನ ಪಾವತಿ ಮಾಡದಿರುವುದನ್ನು ವಿರೋಧಿಸಿ ದಲಿತ ಹಕ್ಕು ಸಮಿತಿಯಿಂದ ಮಂಗಳವಾರ ವಿವಿಯ ಆಡಳಿತ ವಿಭಾಗದ ಬಳಿ ಪ್ರತಿಭಟನೆ ನಡೆಸಲಾಯಿತು.ಕನ್ನಡ ವಿವಿಯಲ್ಲಿ ಕಳೆದ ೧೫ರಿಂದ ೨೦ ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಸ್ವಚ್ಛತಾ ಸಿಬ್ಬಂದಿಯಾಗಿ ದುಡಿಯುತ್ತಿರುವ ೪೮ ಜನ ಹೊರ ಗುತ್ತಿಗೆ ಕಳೆದ ೧೧ ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಈ ಕುರಿತು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಕಾರ್ಯಕಾರಿ ಸಮಿತಿಗೆ ವಿವಿಗೆ ಸಮರ್ಪಕ ಹಣಕಾಸಿನ ಸಂಪನ್ಮೂಲ ಮತ್ತು ಹೊರಗುತ್ತಿಗೆ ನೌಕರರಿಗೆ ವೇತನ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ. ಆರ್ಥಿಕ ಮತ್ತು ಶೈಕ್ಷಣಿಕ ಹಾಗೂ ನಾನಾ ಸಮಸ್ಯೆಗಳನ್ನು ಕನ್ನಡ ವಿವಿ ಎದುರಿಸುತ್ತಿದೆ.
ಕನ್ನಡ ವಿವಿ ಸ್ಥಾಪನೆಗೆ ಸುತ್ತಮುತ್ತಲಿನಲ್ಲಿ ಭೂಮಿ ಬಿಟ್ಟುಕೊಟ್ಟಿದ್ದಾರೆ. ಇಂತಹ ರೈತರ ಮಕ್ಕಳು ಮತ್ತು ಇತರರು ವಿವಿಯಲ್ಲಿ ಕಡಿಮೆ ಕೂಲಿಗಾಗಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದಾರೆ. ಈಗ ಅವರಿಗೆ ಭೂಮಿ ಇಲ್ಲ. ಖಾಯಂ ಉದ್ಯೋಗವಿಲ್ಲ. ಈ ಎಲ್ಲ ಬಡ ರೈತರ, ಕೂಲಿಕಾರರ ಮಕ್ಕಳು ಇದ್ದಾರೆ. ಇಲ್ಲಿ ಹೊರಗುತ್ತಿಗೆ ನೌಕರನಾಗಿ ದುಡಿಯುತ್ತಿದ್ದ ನಂದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದು, ಇದಕ್ಕೆ ಸಂಬಳ ನೀಡದಿರುವುದೇ ಕಾರಣ. ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯನಾಯಕ, ಬಿ.ತಾಐಪ್ಪನಾಯಕ, ಎಂ.ಧನರಾಜ್, ಬಿ.ರಮೇಶ್‌ಕುಮಾರ್, ಸೂರ್ಯನಾರಾಯಣ, ನಾಗುನಾಯ್ಕ, ಎಸ್.ಸತ್ಯಮೂರ್ತಿ ಸೇರಿ ಇತರರಿದ್ದರು.